ರಾಷ್ಟ್ರೀಕೃತ ಬ್ಯಾಂಕುಗಳಿಂದ 6 ತಿಂಗಳಲ್ಲಿ 55,356 ಕೋಟಿ ರೂ ಸಾಲ ಮನ್ನಾ ?

ನವದೆಹಲಿ : 2017ರ ಎಪ್ರಿಲ್-ಸೆಪ್ಟಂಬರ್ ಮಾಸದ ಆರು ತಿಂಗಳ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳು ಒಟ್ಟು 55356 ಕೋಟಿ ರೂ ಸಾಲ ಮನ್ನಾ ಮಾಡಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 54ರಷ್ಟು ಹೆಚ್ಚಾಗಿದೆ ಎಂದು ಇಕ್ರಾ ರೇಟಿಂಗ್ ಸಂಸ್ಥೆ ಹೇಳಿದೆ.

ಎಪ್ರಿಲ್ ಸೆಪ್ಟಂಬರ್ 2016ರ ಅವಧಿಯಲ್ಲಿ ಬ್ಯಾಂಕುಗಳು ಒಟ್ಟು 35985 ಕೋಟಿ ರೂ ಸಾಲ ಮನ್ನಾ ಮಾಡಿದ್ದವು. ಕಳೆದ ಒಂದು ದಶಕದಲ್ಲಿ, ಹಣಕಾಸು ವರ್ಷ 2008-2016ರ ಅವಧಿಯಲ್ಲಿ ಒಟ್ಟು 2,28,253 ಕೋಟಿ ರೂ ಸಾಲಮನ್ನಾ ಮಾಡಲಾಗಿದೆ.

ಬೃಹತ್ ಕಾರ್ಪೊರೇಟ್ ಉದ್ಯಮಿಗಳ ವಿರುದ್ಧ ಹೂಡಲಾಗಿದ್ದ ದೀವಾಳಿ ಮೊಕದ್ದಮೆಗಳ ಹಿನ್ನೆಲೆಯಲ್ಲಿ ಈ ಬೃಹತ್ ಮೊತ್ತದ ಸಾಲ ಮನ್ನಾ ಮಾಡಲಾಗಿದೆ ಎಂದು ಅರ್ಬಿಐ ಮೂಲಗಳೂ ತಿಳಿಸಿವೆ.  21 ಸಾರ್ವಜನಿಕ ಬ್ಯಾಂಕುಗಳ ಒಟ್ಟು ಮರುಪಾವತಿಯಾಗದ ಸಾಲದ ಮೊತ್ತ ಈ ವರ್ಷದ ಸೆಪ್ಟಂಬರ್ ವೇಳೆಗೆ 7.33 ಲಕ್ಷ ಕೋಟಿ ರೂ.ಗಳಷ್ಟಿತ್ತು. ಇದೇ ವರ್ಷದ ಜೂನ್ ತಿಂಗಳಲ್ಲಿ ಆರ್ಬಿಐ ಎಸ್ಸಾರ್ ಸ್ಟೀಲ್, ಮಾನೆಟ್ ಇಸ್ಪಾಟ್, ಭೂಷಣ್ ಸ್ಟೀಲ್ ಅಂಡ್ ಪವರ್ ಮುಂತಾದ ಹಲವು ಬೃಹತ್ ಕಂಪನಿಗಳನ್ನು ಸುಸ್ತಿದಾರರೆಂದು ಘೋಷಿಸಿತ್ತು. ಈ ಎಲ್ಲ ಕಂಪನಿಗಳನ್ನು ಸಾರ್ವಜನಿಕ ಬ್ಯಾಂಕುಗಳು ರಾಷ್ಟ್ರೀಯ ಕಂಪನಿ ನ್ಯಾಯಮಂಡಲಿಯ ಕಟಕಟೆಯಲ್ಲಿ ನಿಲ್ಲಿಸಿದ್ದವು.

ಬ್ಯಾಂಕುಗಳ ಒಟ್ಟು ಆಸ್ತಿಯಲ್ಲಿ ಕುಸಿತ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಬೃಹತ್ ಪ್ರಮಾಣದ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಹಿರಿಯ ವಿಶ್ಲೇಷಕ ಉದಿತ್ ಕರಿವಾಲಾ ಹೇಳುತ್ತಾರೆ. ಅನೇಕ ಬ್ಯಾಂಕುಗಳು ತೆರಿಗೆ ಪಾವತಿಗೆ ಮುನ್ನ ಲಾಭ ಘೋಷಿಸಿ ನಂತರ ನಷ್ಟ ಅನುಭವಿಸಿದ್ದವು. ಸಾಲ ಮನ್ನಾ ಮಾಡುವುದರಿಂದ ತಮ್ಮ ತೆರಿಗೆ ಪಾವತಿ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಬ್ಯಾಂಕುಗಳು ಭಾವಿಸುತ್ತವೆ.

ಬ್ಯಾಂಕುಗಳು ತಮ್ಮ ತೆರಿಗೆ ಹೊರೆಯನ್ನು ತಗ್ಗಿಸಲು ಮತ್ತು ಲೆಕ್ಕ ಪತ್ರಗಳನ್ನು ಸ್ವಚ್ಛವಾಗಿರಿಸಲು ಸಾಲ ಮನ್ನಾ ಅವಶ್ಯಕ ಎಂದು ಆರ್ಬಿಐ ಸಹ ಹೇಳಿದೆ. ಸಾರ್ವಜನಿಕ ಬ್ಯಾಂಕುಗಳು ತಮ್ಮ ಸುಸ್ಥಿ ಸಾಲಗಳನ್ನು ಶೀಘ್ರ ವಸೂಲಿ ಮಾಡಲು ಅಥವಾ ಶೂನ್ಯ ಮಾಡಲು ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಲ್ಲೇ ಆದೇಶ ಹೊರಡಿಸಿದ ಕಾರಣ ಎಂದರೆ ಬ್ಯಾಂಕುಗಳು ತಮ್ಮ ಮೇಲೆ ಹೊರೆ ಹೆಚ್ಚಾಗುತ್ತದೆ ಎಂಬ ಭೀತಿಗೆ ಒಳಗಾಗಿದ್ದವು. ತಮ್ಮ ನಿರ್ಧಾರಗಳು ಸಾಲಗಾರರಿಗೆ ಅನುಕೂಲಕರವಾಗಿದ್ದರೆ ತಮ್ಮ ಮೇಲೆ ಆಪಾದನೆ ಬರುತ್ತದೆ ಎಂಬ ಭೀತಿಯೂ ಬ್ಯಾಂಕ್ ಆಡಳಿತ ಮಂಡಳಿಗಳನ್ನು ಕಾಡಿತ್ತು. ಈ ಹಿನ್ನೆಲೆಯಲ್ಲೇ ಬೃಹತ್ ಪ್ರಮಾಣದ ಸಾಲ ಮನ್ನಾ ಮಾಡಲಾಗಿದೆ.