ಎಸ್ಸಿ /ಎಸ್ಟಿ ಕಲ್ಯಾಣ ಯೋಜನೆ ಕೇಂದ್ರ ಅನುದಾನ ಶೇ 40ರಷ್ಟು ಹೆಚ್ಚಳ ನಿರೀಕ್ಷೆ

ನವದೆಹಲಿ : ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಅನುದಾನದ ಮೊತ್ತವನ್ನು ಶೇ 40ರಷ್ಟು ಹೆಚ್ಚಿಸಲು ಉನ್ನತ ಮಟ್ಟದ ಸಮಿತಿಯೊಂದು ಶಿಫಾರಸು ಮಾಡಿದೆ. ರತನ್ ಪಿ ವಾಟಾಲ್ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಕಲ್ಯಾಣ ಯೋಜನೆಗಳಿಗೆ ನಿಧಿ ಒದಗಿಸಲು ಹೇಳಲಾಗಿದೆ.

12ನೆಯ ಪಂಚವಾರ್ಷಿಕ ಅವಧಿಯಲ್ಲಿ ಈ ಸಮುದಾಯಗಳ ಜನಸಂಖ್ಯೆಗನುಗುಣವಾಗಿ ಅನುದಾನ ಲಭ್ಯವಾಗಿಲ್ಲ. ಈ ಬಾರಿ ಕೇಂದ್ರದ ಯೋಜಿತ ವೆಚ್ಚವಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಿಗೂ ಹೆಚ್ಚಿನ ಹಣ ನೀಡಬೇಕಿರುವುದರಿಂದ ಅನುದಾನದ ಮೊತ್ತ ಹೆಚ್ಚಿಸುವಂತೆ ಸಮಿತಿ ಆಗ್ರಹಿಸಿದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ವಾಟಾಲ್ ಸಮಿತಿಯ ವರದಿಯನ್ನು ಜಾರಿಗೊಳಿಸಿದರೆ ಎಸ್ಸಿ/ಎಸ್ಟಿ ಕಲ್ಯಾಣ ಯೋಜನೆಗಳಿಗೆ ಒಟ್ಟಾರೆ 34 ಸಾವಿರ ಕೋಟಿ ರೂ ಹೆಚ್ಚಿನ ಅನುದಾನ ನೀಡಬೇಕಾಗುತ್ತದೆ. 2011ರ ಜನಗಣತಿಯ ಅನುಸಾರ ಈ ಸಮುದಾಯಗಳ ಜನಸಂಖ್ಯೆ ದೇಶದ ಶೇ 25ರಷ್ಟಿದೆ. ಅಂದರೆ ವಾಟಾಲ್ ಸಮಿತಿಯ ಶಿಫಾರಸಿನ ಅನುಸಾರ ಈ ಸಮುದಾಯಗಳ ಪ್ರಗತಿಗಾಗಿ ಸರ್ಕಾರ ಒಟ್ಟು ವೆಚ್ಚದ ಶೇ 12.5ರಷ್ಟನ್ನು ಖರ್ಚು ಮಾಡಬೇಕಾಗುತ್ತದೆ. ವಾಟಾಲ್ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ 2019ರ ಹಣಕಾಸು ವರ್ಷದಿಂದ ಜಾರಿಗೊಳಿಸುವ ಸಾಧ್ಯತೆಗಳಿವೆ. ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ತನ್ನ ಯೋಜನೆಗಳಿಗೆ ಅನುದಾನ ನೀಡುವಂತೆ ದಲಿತ ಸಮುದಾಯಗಳು ಬಹಳ ವರ್ಷಗಳಿಂದ ಆಗ್ರಹಿಸುತ್ತಲೇ ಇವೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಸರ್ಕಾರ ವಿಳಂಬ ಮಾಡುತ್ತಿದೆ. ಉಚಿತ ಅನಿಲ, ಉದ್ಯೋಗ ಖಾತರಿ ಮತ್ತು ಸ್ಕಾಲರ್ಷಿಪ್ ಮುಂತಾದ ವಿಚಾರಗಳಲ್ಲಿ ಸರ್ಕಾರ ಇದನ್ನು ಜಾರಿಗೊಳಿಸಬಹುದಾಗಿದೆ.