ಮಣ್ಣಿನ ದಿಬ್ಬಕ್ಕೆ ಸ್ಕೂಟರ್ ಡಿಕ್ಕಿ : ಸವಾರ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ಕೂಟರ್ ಸವಾರನೊಬ್ಬ ತನ್ನ ದ್ವಿಚಕ್ರ ವಾಹನವನ್ನು ಆಕಸ್ಮಿಕವಾಗಿ ರಸ್ತೆ ಪಕ್ಕದ ಮಣ್ಣಿನ ರಾಶಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾನೆ. ಕೂಳೂರು-ಕಾವೂರು ರಸ್ತೆಯ ಶಾಂತಿನಗರದಲ್ಲಿ ಗುರುವಾರ ತಡರಾತ್ರಿ ಈ ದುರಂತ ಘಟನೆ ನಡೆದಿದ್ದು, ಕುಂಜತ್ತಬೈಲ್ ದೇವಿನಗರದ ನಿವಾಸಿ ಪ್ರಕಾಶ್ (20) ಮೃತ ದುರ್ದೈವಿ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿಯಾಗಿರುವ ಪ್ರಕಾಶ್ ಗುರುವಾರ ಸಂಜೆ ಸುರತ್ಕಲ್‍ಗೆ ತೆರಳಿದ್ದು, ರಾತ್ರಿ 11 ಗಂಟೆಗೆ ಮನೆ ಕಡೆಗೆ ವಾಪಾಸ್ ಮರಳುತ್ತಿದ್ದಾಗ ಈ ಆಕಸ್ಮಿಕ ಘಟನೆ ನಡೆದು ಮೃತಪಟ್ಟಿದ್ದಾರೆ.

ಶಾಂತಿನಗರದಲ್ಲಿ ನೀರಿನ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಅಗೆದ ಮಣ್ಣನ್ನು ರಸ್ತೆ ಪಕ್ಕದಲ್ಲೇ ರಾಶಿ ಹಾಕಲಾಗಿತ್ತು. ಸ್ಕೂಟರ್ ಚಲಾಯಿಸುತ್ತಿದ್ದ ಪ್ರಕಾಶ್ ಅವರು ಇದೇ ಮಣ್ಣಿ ದಿಬ್ಬಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದರು. ಕಾವೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.