ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ : ಸವಾರ ಗಂಭೀರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿನ ಚಡಾವು ಬಳಿಯಲ್ಲಿ ಮುಲ್ಕಿ ಕಡೆಯಿಂದ ಕೆಂಪುಗುಡ್ಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರನೊಬ್ಬ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಗಾಯಾಳುವನ್ನು ಮಂಗಳೂರು ಚಿಲಿಂಬಿ ಬಳಿಯ ನಿವಾಸಿ ಪುನೀತ್ ಶೆಟ್ಟಿ (24) ಎಂದು ಗುರುತಿಸಲಾಗಿದೆ.

ಮೂಲತಃ ಮಂಗಳೂರಿನ ಚಿಲಿಂಬಿ ಬಳಿ ವಾಸವಾಗಿರುವ ಪುನೀತ್ ಶೆಟ್ಟಿ ತಮ್ಮ ಸಂಬಂಧಿಕರ ಮನೆಯಾದ ವೆಂಕಟರಮಣ ದೇವಸ್ಥಾನ ಬಳಿಯ ಕೆಂಪುಗುಡ್ಡೆಗೆ ಸ್ಕೂಟರಲ್ಲಿ ಒಳರಸ್ತೆಯಲ್ಲಿ ತೆರಳುತ್ತಿರುವಾಗ ಸ್ಕೂಟರ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ. ಡಿಕ್ಕಿ ರಭಸಕ್ಕೆ ತಲೆಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲಿ ರಕ್ತದೋಕುಳಿ ಹರಡಿ ಗಾಯಾಳುವನ್ನು ಸಾಗಿಸಲು ಯಾರೂ ಮುಂದೆ ಬರಲಿಲ್ಲ. ಕೂಡಲೇ ಸ್ಥಳೀಯ ಮನೆಯವರಾದ ಭಾಸ್ಕರ ಕಾಂಚನ್ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.