ರಾಸಾಯನಿಕಭರಿತ ವಾಸನೆಗೆ ತಿರುಗಿದ ಶಾಲೆ ಬಾವಿ ನೀರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಬೈತಖೋಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಾವಿಯ ನೀರು ಸೋಮವಾರ ಇದ್ದಕ್ಕಿದ್ದಂತೆ ರಾಸಾಯನಿಕಭರಿತ ವಾಸನೆಗೆ ತಿರುಗಿ, ಬಾವಿಯಲ್ಲಿದ್ದ ಮೀನುಗಳೆಲ್ಲ ಸಾವಿಗೀಡಾಗಿರುವುದನ್ನು ವೀಕ್ಷಿಸಿದ ಶಿಕ್ಷಕರು ಹಾಗೂ ಸ್ಥಳೀಯರು ಕೆಲವು ಕಾಲ ಆತಂಕಗೊಂಡರು.

ಪ್ರತಿನಿತ್ಯದಂತೆ ಸೋಮವಾರ ನೀರನ್ನು ಕೊಂಡೊಯ್ಯಲು ಬಾವಿಗೆ ಆಗಮಿಸಿದ ಸ್ಥಳೀಯ ಮೀನುಗಾರರಿಗೆ ಬಾವಿಯಲ್ಲಿದ್ದ ಮೀನುಗಳು ಮೃತಪಟ್ಟು ತೇಲುತ್ತಿರುವುದು ಕಂಡುಬಂದಿದ್ದಲ್ಲದೇ ನೀರಿಗೆ ರಾಸಾಯನಿಕದ ವಾಸನೆ ಬರುತ್ತಿರುವುದೂ ಗಮನಕ್ಕೆ ಬಂತು. ತಕ್ಷಣ ಮೀನುಗಾರರು ಶಿಕ್ಷಕರ ಗಮನಕ್ಕೆ ತಂದಿದ್ದು, ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಕಳೆದ ವರ್ಷ ಕೆಲವು ಕಿಡಿಗೇಡಿಗಳು ತೈಲ ಸುರಿದು ನೀರನ್ನು ಕಡಿಸಿದಂತೆ, ಈ ವರ್ಷವೂ ಏನೋ ಕಿತಾಪತಿ ಮಾಡಿರಬಹುದೆಂದು ಆತಂಕಗೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಗರಸಭೆ ಸ್ಥಳೀಯ ಸದಸ್ಯೆ ಛಾಯಾ ಜಾವ್ಕರ್ ಆಗಮಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕರೆಸಿದರು. ಅವರು ಬಾವಿಯ ನೀರು ಕುಡಿಯಲು ಅಯೋಗ್ಯವಾಗಿದ್ದರಿಂದ ನೀರಿನ ಶುದ್ಧೀಕರಣಕ್ಕಾಗಿ ರಾಸಾಯನಿಕ ಔಷಧ ಸಿಂಪಡಿಸಿದ್ದೆವು ಎಂದಾಗ ಗರಂ ಆದ ಸ್ಥಳೀಯರು, “ಈ ಬಗ್ಗೆ ಶಿಕ್ಷಕರ ಗಮನಕ್ಕೂ ತರದೆ ರಾಸಾಯನಿಕ ಸಿಂಪಡಿಸಿರುವುದು ಸರಿಯಲ್ಲ” ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಪತ್ರಕರ್ತರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ, “ಶಾಲಾ ಬಾವಿ ನೀರು ಕುಡಿಯಲು ಯೋಗ್ಯವಿರಲಿಲ್ಲ ಎಂಬುದು ಪರೀಕ್ಷೆಯ ಬಳಿಕ ತಿಳಿದುಬಂದಿತ್ತು. ಹಾಗಾಗಿ ರಜಾ ದಿನವಾದ ಶನಿವಾರ ಸಂಜೆ ದ್ರಾವಣ ಸಿಂಪಡಿಸಲಾಗಿದೆ. ಈ ಬಗ್ಗೆ ಸ್ಥಳೀಯ ನಗರಸಭೆ ಸದಸ್ಯರಿಗೆ ತಿಳಿಸಲಾಗಿದೆ. ರಾಸಾಯನಿಕ ಸಿಂಪಡಿಸಿದ 6 ತಾಸುಗಳ ಬಳಿಕ ನೀರು ಬಳಸಲು ಯಾವುದೇ ತೊಂದರೆಯಿಲ್ಲ. ಇದರಿಂದ ಯಾವುದೇ ಅಪಾಯವಿಲ್ಲ. ನಿರಾತಂಕವಾಗಿ ನೀರನ್ನು ಬಳಸಬಹುದು” ಎಂದು ತಿಳಿಸಿದರು.

 

 

LEAVE A REPLY