ಶಾಲಾ ಪಠ್ಯ ಮತಾಂತರ ಪ್ರಚೋದಿಸುವಂತಿಲ್ಲ

ಪಿಣರಾಯಿ

 ತಿರುವನಂತಪುರಂ : ಮತೀಯ ವಿಚಾರಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಲು ಯಾವುದೇ ಸಂದರ್ಭದಲ್ಲೂ  ಸರಕಾರ ಅನುಮತಿಸುವುದಿಲ್ಲ. ಪಠ್ಯಕ್ರಮ ಏನೇ ಇದ್ದರೂ ಮತಾಂತರಗೊಳಿಸುವುದು ಹೇಗೆ ಎಂಬುದನ್ನು ಯಾವುದೇ ಮಗುವಿಗೆ ಕಲಿಸಬಾರದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಎಲ್ಡಿಎಫ್  ಸರಕಾರ ಧಾರ್ಮಿಕ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದೆ ಎಂಬ  ಮುಸ್ಲಿಂ ಲೀಗ್  ಆರೋಪಕ್ಕೆ ಉತ್ತರವಾಗಿ ಮುಖ್ಯಮಂತ್ರಿ ಮೇಲಿನಂತೆ ಹೇಳಿದ್ದಾರೆ. ವಿವಾದಿತ ಇಸ್ಲಾಮಿಕ್ ಮತಪ್ರಚಾರಕ ಝಾಕಿರ್ ನಾಯ್ಕ್ ಅವರ ಪೀಸ್ ಫೌಂಡೇಶನ್ ನಡೆಸುವ ಶಾಲೆಯೊಂದರ ಪಠ್ಯಕ್ರಮ, ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇತ್ತೀಚೆಗೆ  ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರ ಹೇಳಿಕೆ ಬಂದಿದೆ.

ನಗರದಲ್ಲಿ ನಡೆದ ಸಿಪಿಐ(ಎಂ) ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ಅವರು, ಪೀಸ್ ಫೌಂಡೇಶನ್ ಶಾಲೆಯ ವಿರುದ್ಧದ ಪ್ರಕರಣವನ್ನು ರಾಜ್ಯ ಗೃಹ ಕಾರ್ಯದರ್ಶಿ ತನಿಖೆ ನಡೆಸುತ್ತಿದ್ದಾರೆಂದು ಹೇಳಿದರು.

ಪೀಸ್ ಸ್ಕೂಲ್ ಪಠ್ಯಕ್ರಮದಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಸೇರಿಸಿದ ಆರೋಪದ ಮೇಲೆ ಮೂವರು ಮುಂಬೈ ಮೂಲದ ಪ್ರಕಾಶಕರನ್ನು ಕೊಚ್ಚಿ ಪೊಲೀಸರು ಡಿಸೆಂಬರ್ 2ರಂದು ಬಂಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು.