ಪುಟಾಣಿ ಮಕ್ಕಳನ್ನು ಪ್ರತಿಭಟನೆಗೆ ಬೀದಿಗಿಳಿಸಿದ ಶಾಲಾ ಆಡಳಿತಗಳು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಸಾರಥ್ಯದ ಕಲ್ಲಡ್ಕ ಶ್ರೀರಾಮ ಶಾಲೆ ಹಾಗೂ ಪುಣಚ ಶ್ರೀದೇವಿ ಶಾಲೆಗಳಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ದತ್ತು ಆಧರಿತವಾಗಿ ನೀಡಲಾಗುತ್ತಿದ್ದ ಅನುದಾನವನ್ನು ಇತ್ತೀಚೆಗೆ ರಾಜ್ಯ ಸರಕಾರ ರದ್ದುಗೊಳಿಸಿರುವುದನ್ನು ವಿರೋಧಿಸಿ ಶುಕ್ರವಾರ ಶಾಲಾ ಪುಟಾಣಿಗಳನ್ನು ಶುಕ್ರವಾರ ಬೀದಿಗಿಳಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ವಿರುದ್ದ ಘೋಷಣೆ ಕೂಗಿದರಲ್ಲದೆ, “ಬಡ ಶಾಲಾ ವಿದ್ಯಾರ್ಥಿಗಳ ಅನ್ನಕ್ಕೆ ಕಲ್ಲು ಹಾಕಿದ ಸರಕಾರವನ್ನು ಮುರಿದು ಹಾಕುತ್ತೇವೆ” ಎಂದು ಎಚ್ಚರಿಸುವ ಮಾತುಗಳನ್ನಾಡಿದರು. ಶುಕ್ರವಾರ ಬೆಳಿಗ್ಗೆಯೇ ಶಾಲೆಗೆ ಚಕ್ಕರ್ ಹಾಕಿದ ಬಟ್ಟಲು ಹಿಡಿದು ಬಿ ಸಿ ರೋಡು ಪೇಟೆಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ರಸ್ತೆಯಿಡೀ ಓಡಾಡಿದರಲ್ಲದೆ ವಿವಿಧ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದರು. ಶಾಲಾ ಶಿಕ್ಷಕ-ಶಿಕ್ಷಕಿಯರು ಈ ಸಂದರ್ಭ ಸಾಥ್ ನೀಡಿದರು.