ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸುತ್ತಿರುವ ವಿವೇಕಾನಂದ ಶಾಲೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶಾಲಾ ಮಕ್ಕಳಲ್ಲಿ ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದ ಅಭಿರುಚಿಯನ್ನು ಮೂಡಿಸುವ ವಿಶಿಷ್ಟ ಕಾರ್ಯವನ್ನು ನಡೆಸುತ್ತಿದೆ ಪುತ್ತೂರು ತಾಲೂಕಿನ ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ. ಹನ್ನೆರಡು ವರ್ಷಗಳ ಹಿಂದೆ ಶಾಲೆಯಲ್ಲಿ ಯಕ್ಷ ಚಿಣ್ಣರ ಬಳಗ ಸ್ಥಾಪಿಸಲಾಗಿದ್ದರೆ ಇಲ್ಲಿಯ ತನಕ ಈ ಬಳಗದ ಮೂಲಕ ಹಲವಾರು ಮಕ್ಕಳಿಗೆ ಯಕ್ಷಗಾನದಲ್ಲಿ ತರಬೇತಿ ನೀಡಲಾಗಿದೆ. ಪ್ರಸಕ್ತ 38 ವಿದ್ಯಾರ್ಥಿಗಳು ಈ ಬಳಗದ ಗರಡಿಯಲ್ಲಿ ಯಕ್ಷಗಾನ ಕಲೆಯಲ್ಲಿ ಪಳಗುತ್ತಿದ್ದಾರೆ.

ಇತ್ತೀಚೆಗೆ ಈ ಶಾಲೆ ಪ್ರಪ್ರಥಮವಾಗಿ ತನ್ನ ಬೆಳ್ಳಿ ಹಬ್ಬ ಸಮಾರಂಭದಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯನ್ನು ಮಕ್ಕಳಿಗಾಗಿ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ 11 ವರ್ಷದ ಕೆಳಗಿನ ಒಟ್ಟು 11 ಮಂದಿ ಸದಸ್ಯರಿರುವ ಮಕ್ಕಳ ತಂಡಗಳು ಭಾಗವಹಿಸಿದ್ದವಲ್ಲದೆ ಪ್ರತೀ ತಂಡಕ್ಕೆ 45 ನಿಮಿಷಗಳ ಕಾಲಾವಕಾಶ ಒದಗಿಸಲಾಗಿತ್ತು. ಈ ಬಾರಿ ಆರು ತಂಡಗಳು ಭಾಗವಹಿಸಿದ್ದವು. ಖ್ಯಾತ ಕಲಾವಿದರಾದ ಅಪ್ಪಕುಂಞ ಮಣಿಯಾಣಿ, ಜಯಾನಂದ ಸಂಪಾಜೆ ಹಾಗೂ ಚಂದ್ರಶೇಖರ ಹೆಗ್ಡೆ ತೀರ್ಪುಗಾರರಾಗಿದ್ದರು. ಮುಂದಿನ ಬಾರಿ ಈ ಸ್ಪರ್ಧೆಯನ್ನು ದೊಡ್ಡ ಮಟ್ಟದಲ್ಲಿ ನಡೆಸುವ ಉದ್ದೇಶವಿದೆ ಎಂದು ಶಾಲೆಯ ಯಕ್ಷಗಾನ ತಂಡದ ಸಂಘಟಕ ಹಾಗೂ ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ಹೇಳಿದ್ದಾರೆ.

ಪ್ರಸಕ್ತ ಜಿಲ್ಲೆಯಲ್ಲಿ ಸುಮಾರು 20 ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸಲಾಗುತ್ತಿದೆ. ವಿವೇಕಾನಂದ ಶಾಲೆಯಲ್ಲಿ ವಾರಾಂತ್ಯಗಳಲ್ಲಿ ಮಕ್ಕಳಿಗೆ ಪುಂಡು ವೇಷ, ಬಣ್ಣದ ವೇಷ, ಸ್ತ್ರೀ ವೇಷ, ಹಾಸ್ಯ ವೇಷ ಮುಂತಾದ ತೆಂಕುತಿಟ್ಟು ಯಕ್ಷಗಾನದ ವಿವಿಧ ಅಂಗಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಚಂದ್ರಶೇಖರ್ ಹೇಳುತ್ತಾರೆ.