ಭಿನ್ನಚೇತನ ಬಾಲಕಿಗೆ ಪ್ಯಾಕೆಟ್ ಮನಿಯಿಂದ ಗಾಲಿಕುರ್ಚಿ ಕೊಡುಗೆ ನೀಡಿದ ಶಾಲಾ ಮಕ್ಕಳು

ಜೈಪುರ : ರಾಜಸ್ತಾನದ ಶ್ರೀ ಗಂಗಾನಗರ ಜಿಲ್ಲೆಯ ಖಾಸಗಿ ಶಾಲೆಯೊಂದರ 2ನೇ ತರಗತಿ ವಿದ್ಯಾರ್ಥಿಗಳು ತಮ್ಮ ಪಾಕೇಟ್ ಮನಿ ಒಟ್ಟು ಸೇರಿಸಿ, ಭಿನ್ನಚೇತನ ಬಡ ಬಾಲಕಿಯೊಬ್ಬಳಿಗೆ ಗಾಲಿ ಕುರ್ಚಿ (ವ್ಹೀಲ್‍ಚೇರ್) ನೀಡಿ, ಆಕೆಯ ಬದುಕಿಗೆ ಆಸರೆಯಾದ ಅಪೂರ್ವ ಹಾಗೂ ಉದಾತ್ತ ಘಟನೆ ನಡೆದಿದೆ.

ಶಾಲೆಗೆ ಅತಿ ಕಷ್ಟಕರ ನಡಿಗೆಯಲ್ಲಿ ಆಗಮಿಸಿದ ಬಾಲಕಿಯನ್ನು ಕಂಡಿದ್ದ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಕಾತಿ ಆಕೆಯ ಸ್ಥಿತಿ ಕುರಿತು ತನ್ನ ಅಜ್ಜನಲ್ಲಿ ಪ್ರಶ್ನಿಸಿದಳು.

ಈ ಸಮಾಜದಲ್ಲಿ ಬಿನ್ನಚೇತನರಾದ ಬಡವರಿಗೆ ಇನ್ನೂ ಅಗತ್ಯ ಸವಲತ್ತುಗಳು ಸಿಕ್ಕಿಲ್ಲ. ಹಾಗಾಗಿ ಆಕೆಯ ಬದುಕು ಕಷ್ಟಕರವಾಗಿದೆ ಎಂದು ಖ್ಯಾತಿಯ ಅಜ್ಜ, ನಿವೃತ್ತ ಆಯುರ್ವೇದ ವೈದ್ಯ ವಿವರಿಸಿದರು. ಈ ಮಾತನ್ನು ಮನಸ್ಸಿಗೆ ಹಚ್ಚಿಕೊಂಡ ಕಾತಿ, ಭಿನ್ನಚೇತನ ಬಾಲಕಿಗೆ ವ್ಹೀಲ್‍ಚೇರ್ ಕೊಡುಗೆಯಾಗಿ ನೀಡಲು ಮನಸ್ಸು ಮಾಡಿ, ತನ್ನ ತರಗತಿಯ 25-30 ಮಕ್ಕಳಿಂದ ಪ್ಯಾಕೇಟ್ ಮನಿಯೊಂದಿಗೆ ನೆರವಾಗುವಂತೆ ವಿನಂತಿಸಿಕೊಂಡಳು. ಕೆಲವರು 100ರಿಂದ 1,000 ರೂವರೆಗೆ ಸಹಾಯ ಮಾಡಿದರು. ಹೀಗೆ ಸಂಗ್ರಹಿಸಲಾದ ಮೊತ್ತದಿಂದ ಒಂದು ವ್ಹೀಲ್‍ಚೇರ್ ಖರೀದಿಸಿದಳು.

ಹರ್ಕೆವಾಲಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಾಲಕಿ ಉಷಾಳಿಗೆ ಈ ವ್ಹೀಲ್ ಚೇರನ್ನು ನಾಲ್ಕೈದು ದಿನಗಳ ಹಿಂದೆ ಹಸ್ತಾಂತರಿಸಲಾಗಿದೆ ಎಂದು ಕಾತಿಯ ಚಿಕ್ಕಪ್ಪ ಹೇಳಿದರು.