ಬುಡಕಟ್ಟು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಾಲಾ ಅಡುಗೆ ತಯಾರಕ ವಿರುದ್ಧ ಕೇಸು

ನಾಗ್ಪುರ : ನಗರದ ಸರಹದ್ದಿನಲ್ಲಿರುವ ಬೊಖಾರ ರೋಡಿನಲ್ಲಿರುವ ಪ್ರತಿಷ್ಠಿತ ಶಾಲೆಯೊಂದರ ಬಿಸಿಯೂಟ ತಯಾರಕನ  ವಿರುದ್ಧ ನಾಲ್ವರು ಬುಡಕಟ್ಟು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ಬುಡಕಟ್ಟು ಪ್ರಾಜೆಕ್ಟ್ ಅಧಿಕಾರಿ ಶುಭಾಂಗಿ ಸಕ್ಪಾಲ್ ಮತ್ತು ಅವರ ತಂಡ ಶಾಲೆಗೆ ಭೇಟಿ ನೀಡಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಪ್ರಾಜೆಕ್ಟಿನಡಿ ಕಲಿಯುತ್ತಿರುವ ಬುಡಕಟ್ಟು ವಿದ್ಯಾರ್ಥಿನಿಯರ ಮೇಲೆ ಈ ಹೇಯ ಕೃತ್ಯ ನಡೆದಿದೆ. ಆರೋಪಿ ಜಮೀರ್ ಬಪಟ್ಟಿ ವಿರುದ್ಧ ಕೊರಾಡಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಬುಡಕಟ್ಟು ಶಾಲೆಯ ಬುಡಕಟ್ಟು ವಿದ್ಯಾರ್ಥಿನಿಯರ ಮೇಲೆ ನಡೆದಿರುವ 2ನೇ ಲೈಂಗಿಕ ಕಿರುಕುಳ ಪ್ರಕರಣ ಇದಾಗಿದ್ದು, ಇಲ್ಲಿನ ಶಾಲಾ ಸಂಸ್ಥೆಯಲ್ಲಿ ಬಾಲಕಿಯರಿಗೆ ಸುರಕ್ಷತೆ ಪ್ರಶ್ನೆ ಉದ್ಭವಿಸಿದೆ.