ಆಂಗ್ಲ ಮಾಧ್ಯಮ ಶಾಲೆಗೆ ಕನ್ನ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿನ ದೀನರ ಕನ್ಯಾಮಾತೆ ದೇವಾಲಯದ ಆಡಳಿತಕ್ಕೊಳಪಟ್ಟ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ನುಗ್ಗಿದ ಕಳ್ಳರು ಒಟ್ಟು 59 ಸಾವಿರ ರೂಪಾಯಿಯ ಸೊತ್ತನ್ನು ಕಳವುಗೈದ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಉಪ್ಪಿನಂಗಡಿಯಲ್ಲಿರುವ ಸೈಂಟ್ ಮೇರಿಸ್ ಶಾಲೆಯ ಉಪ ಪ್ರಾಚಾರ್ಯರ ಕೊಠಡಿ ಹಾಗೂ ಮೇಲಂತಸ್ತಿನಲ್ಲಿರುವ ಶಿಕ್ಷಕರ ಕೊಠಡಿ, ಕಚೇರಿ ಕೊಠಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಕೊಠಡಿ ಬಾಗಿಲುಗಳ ಬೀಗವನ್ನು ಎಕ್ಸಲ್ ಬ್ಲೇಡಿನಿಂದ ತುಂಡರಿಸಿ ಬಾಗಿಲು ತೆರೆದು ಒಳನುಗ್ಗಿರುವ ಕಳ್ಳರು ಕಪಾಟು, ಡ್ರಾವರುಗಳನ್ನೆಲ್ಲಾ ಜಾಲಾಡಿ, ಕಡತಗಳನ್ನು ಚೆಲ್ಲಾಪಿಲ್ಲಿಯನ್ನಾಗಿಸಿದ್ದಾರೆ. ಅಲ್ಲದೇ, ಅಲ್ಲಿದ್ದ ಒಟ್ಟು 34 ಸಾವಿರ ರೂಪಾಯಿ ನಗದು ಹಾಗೂ ಎರಡು ಮೊಬೈಲುಗಳನ್ನು ಕದ್ದೊಯ್ದಿದ್ದಾರೆ. ಇದರೊಂದಿಗೆ ಸೀಸಿ ಕ್ಯಾಮರಾದ ಡಿವಿಆರ್ ಅನ್ನು ಕದ್ದೊಯ್ದಿದ್ದಾರೆ. ಕಳವಾದ ಸೊತ್ತಿನ ಮೌಲ್ಯ ಒಟ್ಟು 59 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಶಾಲೆಯಲ್ಲಿ ಹಲವು ಸೀಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಹೆಚ್ಚಿನ ಸೀಸಿ ಕ್ಯಾಮರಾಗಳ ದಿಕ್ಕನ್ನು ಬೇರೆಡೆ ತಿರುಗಿಸಿದ್ದಾರೆ. ಕೆಲವು ಕಡೆ ಕ್ಯಾಮರಾದ ವಯರುಗಳನ್ನು ತುಂಡರಿಸಲಾಗಿದೆ. ಇಲ್ಲಿ ಕಂಪ್ಯೂಟರ್ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳಿದ್ದರೂ ಅವುಗಳನ್ನು ಕಳ್ಳರು ಮುಟ್ಟಿಲ್ಲ.  ಮಂಗಳವಾರ ರಾತ್ರಿ ಕಳ್ಳರು ಈ ಕೃತವೆಸಗಿದ್ದಾರೆ. ಸುದ್ದಿ ತಿಳಿದು ಪುತ್ತೂರು ಗ್ರಾಮಾಂತರ ಮತ್ತು ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.