ಮುಸ್ಲಿಂ ಯುವಜನತೆ ಆಧುನಿಕ ಸಂಗೀತದಲ್ಲಿ ಮೈಮರೆಯುತ್ತಿದ್ದಾರೆ : ವಾಗ್ಮಿ ಬಾಖವಿ ಕಳವಳ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಮುಸ್ಲಿಂ ಯುವ ಸಮೂಹ ಆಧುನಿಕ ಪಾಶ್ಚಿಮಾತ್ಯ ಸಂಗೀತದ ಲಹರಿಯಲ್ಲಿ ತೇಲಾಡುತ್ತಿದ್ದು, ಇದುವೇ ಸಮುದಾಯಕ್ಕೆ ತಟ್ಟಿರುವ ಬಲುದೊಡ್ಡ ಶಾಪವಾಗಿದೆ ಎಂದು ಅಂತರಾಷ್ಟ್ರೀಯ ವಾಗ್ಮಿ ಹಾಫಿಳ್ ಅಹ್ಮದ್ ಕಬೀರ್ ಬಾಖವಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಫರಂಗಿಫೇಟೆ ಟುಡೇ ಫೌಂಡೇಶನ್ ಹಾಗೂ ಮಂಗಳೂರು ಯು ಟಿ ಫರೀದ್ ಫೌಂಡೇಶನ್ ಆಶ್ರಯದಲ್ಲಿ ಮದ್ರಸ ತುತ್ತಿಬ್‍ಯಾನ್ ಇದರ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಫರಂಗಿಫೇಟೆ ಜಂಕ್ಷನ್ ಉಸ್ತಾದ್ ವೇದಿಕೆಯಲ್ಲಿ  ಶುಕ್ರವಾರ ರಾತ್ರಿ ನಡೆದ ಮತ ಪ್ರವಚನ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ಮುಸ್ಲಿಂ ಸಮೂಹ ಪ್ರಾರ್ಥನೆಗೆ ಉತ್ತರ ದೊರೆಯುವ ಅತ್ಯಮೂಲ್ಯ ಸಮಯದಲ್ಲಿ ಸ್ತ್ರೀ-ಪುರುಷ ಹಾಗೂ ಮಕ್ಕಳಾದಿಯಾಗಿ ಲಜ್ಜಾರಹಿತವಾಗಿ ಟೀವಿ ಧಾರಾವಾಹಿ, ಸಿನಿಮಾ ಮೊದಲಾದ ಆಶ್ಲೀಲ ಸಂಗೀತ ಹಾಗೂ ಅನಾವಶ್ಯಕ ಅನಿಸ್ಲಾಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ನೈತಿಕತೆಯಿಂದ ದೂರ ಸರಿಯುತ್ತಿರುವುದೇ ಧಾರ್ಮಿಕತೆ ಮಾಯವಾಗಲು ಕಾರಣವಾಗಿದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜನ ಎಷ್ಟೇ ಕನಿಷ್ಠ ಸಂಖ್ಯೆಯಲ್ಲಿದ್ದರೂ ಅಲ್ಲಿನ ನೈತಿಕ ಮೌಲ್ಯಗಳನ್ನು ಹೃದಯಕ್ಕಿಳಿಸಿಕೊಳ್ಳುವುದರಲ್ಲಿ ಅದರ ಯಶಸ್ಸು ಅಡಗಿದೆ ಎಂದ ಕಬೀರ್ ಬಾಖವಿ, “ಪವಿತ್ರ ಕುರ್‍ಆನ್ ಯಾವತ್ತೂ ಯಾರೂ ಮುಟ್ಟದಂತೆ ಭದ್ರವಾಗಿಡುವ ಗ್ರಂಥವಲ್ಲ. ಸರ್ವರ ಹೃದಯಕ್ಕೆ ನಾಟಬೇಕಾದ ಗ್ರಂಥವಾಗಿದೆ ಕುರ್ ಆನ್. ಈ ನಿಟ್ಟಿನಲ್ಲಿ ಪ್ರತಿ ಮನೆಯಲ್ಲೂ ಕುರ್ ಆನ್ ಪಾರಾಯಣ ನಿರಂತರವಾಗಿ ನಡೆಯಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

25bntph2

ಸಹೋದರ ಧರ್ಮೀಯರ ಆಚಾರ-ವಿಚಾರ ಗೌರವಿಸಿ

ಸಹೋದರ ಧರ್ಮೀಯರ ಆಚಾರ-ವಿಚಾರಗಳನ್ನು ಯಾವತ್ತೂ ಮುಸ್ಲಿಮನಾದವನು ವಿಮರ್ಶಿಸುವಂತಿಲ್ಲ. ಪ್ರತಿಯೊಬ್ಬನು ಅವರವರ ಧಾರ್ಮಿಕ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಲಿ ಎಂದ ಕಬೀರ್ ಬಾಖವಿ ಸಹೋದರ ಧರ್ಮೀಯರ ಆಚಾರ-ವಿಚಾರಗಳನ್ನು ಗೌರವಿಸುವುದರ ಜೊತೆಗೆ ತನ್ನ ಧರ್ಮವನ್ನು ಯಥಾವತ್ ಪಾಲಿಸಿದರೆ ಆತ ನೈಜ ಮುಸಲ್ಮಾನನಾಗಲು ಸಾಧ್ಯ ಎಂದರು.

`ಕುರ್ ಆನ್ ಕಂಠಪಾಠಕ್ಕೆ ಮಕ್ಕಳನ್ನು ಪ್ರೇರೇಪಿಸಿ’

ಹೆತ್ತವರು ತಮ್ಮ ಮಕ್ಕಳನ್ನು ಕುರ್ ಆನ್ ಕಂಠಪಾಠಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಪ್ರೇರೇಪಿಸಬೇಕು. ಮುಸ್ಲಿಮನ ಹೃದಯದಲ್ಲಿ ಕುರ್ ಆನ್ ಇದ್ದಲ್ಲಿ ಆತ ಎಲ್ಲವನ್ನೂ ಕರಗತ ಮಾಡಿಕೊಂಡಂತೆ. ಎಲ್ಲಾ ಕ್ಷೇತ್ರಗಳ ವಿದ್ಯೆಯನ್ನೂಯೂ ಕುರ್‍ಆನ್ ನಮಗೆ ಕಲಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕುರ್ ಆನ್ ಕಂಠಪಾಠದಂತಹ ವಿದ್ಯೆಯನ್ನು ಧಾರೆ ಎರೆಯಿರಿ” ಎಂದು ಕಬೀರ್ ಬಾಖವಿ ಪೋಷಕರಿಗೆ ಕರೆ ನೀಡಿದರು.

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಯು ಟಿ ಖಾದರ್ ಅವರ 11 ವರ್ಷ ಪ್ರಾಯದ ಪುತ್ರಿ ಹವ್ವ ಅವರು ಕುರ್ ಆನ್ ಕಂಠಪಾಠ ಮಾಡಿ ಬಿರುದು ಪಡೆಯುತ್ತಿರುವುದು ಅತ್ಯಂತ ಸಂತೋಷದಾಯ ವಿಚಾರ ಎಂದು ಕೊಂಡಾಡಿದ ರು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ ಪಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸಿದರು. ಫರಂಗಿಫೇಟೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಫ್ ಮುಹಮ್ಮದ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗೂ ಆಹಾರ ಸಚಿವ ಯು ಟಿ ಖಾದರ್ ಶುಭ ಹಾರೈಸಿದರು.    ತುಂಬೆ ಬಿ ಎ ಗ್ರೂಪ್ ಸ್ಥಾಪಕ ಬಿ ಅಹ್ಮದ್ ಹಾಜಿ ಮುಹಿಯುದ್ದೀನ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.