ಬೆಳಗಾವಿ ಗಡಿ ವಿವಾದ : ರಾಜ್ಯದ ಅಪೀಲು ಪರಿಗಣಿಸಲಿರುವ ಸುಪ್ರೀಂ

ನವದೆಹಲಿ : ಬೆಳಗಾವಿ ಜಿಲ್ಲೆಯ 865 ಗ್ರಾಮಗಳ ಮೇಲೆ ತನಗೆ ಹಕ್ಕಿದೆ ಎಂದು ವಾದಿಸಿ ಮಹಾರಾಷ್ಟ್ರ ಸಲ್ಲಿಸಿರುವ ಮೂಲ ಅರ್ಜಿಯ ಸಮರ್ಥನೀಯತೆಯನ್ನು ಪ್ರಶ್ನಿಸಿ ಕರ್ನಾಟಕ ಸಲ್ಲಿಸಿರುವ ಅಪೀಲನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ. ಈ ಅಪೀಲಿನ ಮೇಲಿನ ವಿಚಾರಣೆಯನ್ನು ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಮಾರ್ಚ್ 10ಕ್ಕೆ ನಿಗದಿ ಪಡಿಸಿದೆ.

ಸಂವಿಧಾನದ 131ನೇ ಪರಿಚ್ಛೇದದಂತೆ ರಾಜ್ಯದ ಪುನರ್ ಸಂಘಟನೆಯೊಂದನ್ನು ಪ್ರಶ್ನಿಸುವಂತಿಲ್ಲ ಹಾಗೂ ಗಡಿಗಳನ್ನು ಪುನರ್ ವಿಂಗಡಿಸುವ ಅಧಿಕಾರ ಸಂವಿಧಾನದ 3ನೇ ಪರಿಚ್ಛೇದದಂತೆ ಕೇವಲ ಸಂಸತ್ತಿಗೆ ಮಾತ್ರ ಅಧಿಕಾರವಿದೆ ಎಂದು ಕರ್ನಾಟಕ ಸರಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಪಿ ರಾವ್ ವಾದಿಸಿದ್ದರು.

ಆದರೆ ಕೇಂದ್ರ ಸರಕಾರದ ಕಾನೂನು ಸರಿಯಾಗಿಲ್ಲ ಎಂದು ರಾಜ್ಯಗಳು ವಾದಿಸಬಾರದೆಂದೇನಿಲ್ಲ ಎಂದು ಮಹಾರಾಷ್ಟ್ರ ಸರಕಾರದ ವಕೀಲರು ತಮ್ಮ ವಾದ ಮಂಡಿಸಿದ್ದರು.

ಮಹಾರಾಷ್ಟ್ರ ತನ್ನ ಅಪೀಲನ್ನು 2004ರಲ್ಲಿ ಸಲ್ಲಿಸಿರುವುದರಿಂದ ರಾಜ್ಯಗಳ ಪುನರ್ ಸಂಘಟನೆಯಾಗಿ 48 ವರ್ಷಗಳ ನಂತರ ಅವುಗಳನ್ನು ಪ್ರಶ್ನಿಸಬಹುದೇ ಎಂದೂ ನ್ಯಾಯಾಲಯ ಪ್ರಶ್ನಿಸಿತ್ತು.