ಕಂಬಳ ತಡೆಗೆ ಸುಪ್ರೀಂ ನಕಾರ ; ಅಂತಿಮ ವಿಚಾರಣೆ ಮಾ 14ರಂದು

ನವದೆಹಲಿ : ಕಂಬಳ ಜಾನಪದ ಕ್ರೀಡೆಯನ್ನು ನಿಷೇಧಿಸಬೇಕೆಂದು ಕೋರಿ ಪೆಟಾ ಸಲ್ಲಿಸಿದ್ದ ಅಪೀಲಿನ ಮೇಲೆ ಯಾವುದೇ ಆದೇಶ ನೀಡಲು  ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ನಿಟ್ಟಿನಲ್ಲಿ ಅಂತಿಮ ವಿಚಾರಣೆಯನ್ನು ಮಾರ್ಚ್ 14ಕ್ಕೆ ನಿಗದಿಪಡಿಸಿದೆ.

ಕಂಬಳ ಕ್ರೀಡೆಯನ್ನು ಅನುಮತಿಸಿ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯ  ಕಾಲಾವಧಿ ಈಗಾಗಲೇ ಕಳೆದು ಹೋಗಿರುವುದರಿಂದ  ಹಾಗೂ ಪೆಟಾ ಈ ಸುಗ್ರೀವಾಜ್ಞೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದರಿಂದ ಈ ಅಪೀಲು ಈಗ ವ್ಯರ್ಥ ಎಂದು ಹೆಚ್ಚುವರಿ ಅಡ್ವಕೇಟ್ ಜನರಲ್  ವಾದಿಸಿದರೆ,  ಸುಗ್ರೀವಾಜ್ಞೆ ಊರ್ಜಿತದಲ್ಲಿಲ್ಲವೆಂಬುದನ್ನು ಪೆಟಾ ಪರ ವಕೀಲ ಸಿದ್ಧಾರ್ಥ್ ಲುಥ್ರಾ ಒಪ್ಪಿಕೊಂಡರೂ ಕಂಬಳ ಮಸೂದೆಗೆ ಅಂಕಿತ ಪಡೆಯಲು

ಬಾಕಿಯಿದೆ ಹಾಗೂ ಕಂಬಳಗಳು ಈಗಲೂ ನಡೆಯುತ್ತಿವೆ ಎಂದರು. ಕೇಂದ್ರ ಸರಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್  ಪಿಂಕಿ ಆನಂದ್ ತಮ್ಮ ವಾದ ಮಂಡಿಸುತ್ತಾ  ಪ್ರಾಣಿ ಹಿಂಸೆ ತಡೆ ಕಾಯಿದೆ ಮಸೂದೆ 2017 ರಾಷ್ಟ್ರಪತಿಗಳ ಅಂಕಿತ ಇನ್ನಷ್ಟೇ ಪಡೆಯಬೇಕಿದೆ ಎಂದು ಹೇಳಿದರು.

2014ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಮಹಾರಾಷ್ಟ್ರದ ಎತ್ತಿನ ಗಾಡಿ ಓಟವನ್ನು  ಪ್ರಾಣಿ ಹಕ್ಕು ಉಲ್ಲಂಘನೆಗಾಗಿ  ನಿಷೇಧಿಸಿ ಹೊರಡಿಸಿದ ಆದೇಶದ ತಳಹದಿಯನ್ನೇ ಕಂಬಳ  ಸುಗ್ರೀವಾಜ್ಞೆ ಮೀರಿದೆ ಎಂದು ಪೆಟಾ ವಾದಿಸಿದರೆ ಕಂಬಳದಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆ ನಡೆಯುತ್ತಿಲ್ಲ ಎಂದು ಕರ್ನಾಟಕ ಸರಕಾರ ಹೇಳಿದೆ.

 

 

 

LEAVE A REPLY