17 ವರ್ಷ ಬಳಿಕ ಮರುತನಿಖೆಗೆ ಸುಪ್ರೀಂ ಆದೇಶ

ಒಂದೇ ಕುಟುಂಬ ನಾಲ್ವರ ಕೊಲೆ

ನವದೆಹಲಿ : ಪ್ರತ್ಯೇಕ ಘಟನೆಗಳಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಕೊಲೆಗೀಡಾಗಿದ್ದ 17 ವರ್ಷಗಳಷ್ಟು ಹಿಂದಿನ ಪ್ರಕರಣವೊಂದರ ವಿಚಾರಣೆ ಪುನರಾರಂಭಿಸಲು ನಿರ್ಧರಿಸಿದ ಸುಪ್ರೀಂ ಕೋರ್ಟ್, ನೈಜ ಆರೋಪಿಗಳ ಬಂಧನಕ್ಕೆ ವಿಶೇಷ ತನಿಖಾ ತಂಡ ರಚನೆಗೆ ಆದೇಶಿಸಿದೆ.

ಸಿಬಿಐನ ಮಾಜಿ ವಿಶೇಷ ನಿರ್ದೇಶಕ ಎಂ ಎಲ್ ಶರ್ಮರನ್ನು ಎಸ್ ಐ ಟಿ ತಂಡದ ಮುಖ್ಯಸ್ಥರನ್ನಾಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜಸ್ಟಿಸ್ ಚೆಲಮೇಶ್ವರ ಮತ್ತು ಎಸ್ ಎ ನಜೀರ್ ನ್ಯಾಯಪೀಠದೆದುರು ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. “ದೂರದಾರ ಕುಟುಂಬದ ಸದಸ್ಯರನ್ನು ಕೊಲೆಗೈದಿರುವ ನೈಜ ಆರೋಪಿಗಳು ಈವರೆಗೂ ವಿಚಾರಣೆ ಸಿಕ್ಕಿಲ್ಲ. ಹಿಂದೆ ವಿಚಾರಣೆ ನಡೆಸಿದ ತನಿಖಾ ಏಜೆನ್ಸಿಯ ವಿಚಾರಣಾ ಕೊರತೆಯಿಂದ ನೈಜ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ” ಎಂದು ನ್ಯಾಯಪೀಠದ ಆದೇಶದಲ್ಲಿ ವಿವರಿಸಲಾಗಿದೆ.

2001ರಲ್ಲಿ ಸೀಮಾ ಗಾರ್ಗ್ (38) ಮತ್ತು ಆಕೆಯ ಮಕ್ಕಳಾದ ಭವ್ಯಾ (4) ಮತ್ತು ಪ್ರತ್ಯಕ್ಷಾ (8 ತಿಂಗಳು) ಶವವು ಆಗಿನ ಉತ್ತರ ಪ್ರದೇಶದ ಗಾಝಿಯಾಬಾದ್ ವ್ಯಾಪ್ತಿಯಲ್ಲಿದ್ದ ಪಿಲಖುವಾದ ಮನೆಯಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣದಲ್ಲಿ ಸೀಮಾಳ ಪತಿ ನಿತೀನ್ ಗಾರ್ಗ್ ಹಾಗೂ ಇತರ ಇಬ್ಬರ ವಿರುದ್ಧ ಆರೋಪ ಹೊರಿಸಲಾಗಿದ್ದರೂ, ವಿಚಾರಣೆ ಬಳಿಕ ಆರೋಪಮುಕ್ತಗೊಂಡಿದ್ದರು. ಇದಾದ ಒಂದೇ ವರ್ಷದಲ್ಲೇ ನಿತಿನ್ ಗಾರ್ಗ್ ಕೂಡಾ ಗುಂಡೇಟಿನಿಂದ ಬಲಿಯಾಗಿದ್ದರು.

2005ರಲ್ಲಿ ನಿತಿನ್ ಕುಟುಂಬ ಸರ್ವೋಚ್ಛ ಕೋರ್ಟ್ ಮೆಟ್ಟಲೇರಿತ್ತು. 2013ರಲ್ಲಿ ಪ್ರಕರಣದ ಸಿಬಿಐ ತನಿಖೆಗೆ ಸುಪ್ರೀಂ ಆದೇಶಿಸಿತ್ತು. ಆದಾಗ್ಯೂ ಗಾರ್ಗ್ ಕುಟುಂಬ ಈ ಪ್ರಕರಣ ಮುಂದುವರಿಸಲು ಇಚ್ಚಿಸದ್ದರಿಂದ ಸುಪ್ರೀಂ ಕೋರ್ಟ್ 2014ರ ಸೆಪ್ಟೆಂಬರಿನಲ್ಲಿ ಸಿಬಿಐ ತನಿಖೆ ಹಿಂಪಡೆಯಲು ಆದೇಶಿಸಿತ್ತು.

ಇದಾದ ಬಳಿಕ ನಿತಿನ್ ತಾಯಿ ಸುನಿತಾ ದೇವಿ ಮತ್ತು ಸಹೋದರ ಅಜಯ್ ಗಾರ್ಗ್ ಪುನಾ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿತ್ತು. “ನಮ್ಮ ಕುಟುಂಬಕ್ಕೆ ಬಂದಿದ್ದ ಜೀವ ಬೆದರಿಕೆಯ ಸಹಿತ ಅನೇಕ ಕಾರಣಗಳಿಗಾಗಿ ನಾವು ಆ ಹೊತ್ತು ಪ್ರಕರಣ ಹಿಂಪಡೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆವು” ಎಂದು ಅರ್ಜಿಯಲ್ಲಿ ಗಾರ್ಗ್ ಕುಟುಂಬ ವಿವರಿಸಿದೆ.

LEAVE A REPLY