ದೇಶಾದ್ಯಂತ ಪೊಲೀಸರ ಹುದ್ದೆ ಭರ್ತಿಗೆ ಸುಪ್ರೀಂ ಸೂಚನೆ

ನವದೆಹಲಿ : ದೇಶದ ಎಲ್ಲ ರಾಜ್ಯಗಳಲ್ಲಿ ಖಾಲಿ ಬಿದ್ದಿರುವ ಐದು ಲಕ್ಷ ಪೊಲೀಸ್ ಹುದ್ದೆ ಭರ್ತಿಗೊಳಿಸುವಂತೆ ಗೃಹ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್, ಒಂದು ತಿಂಗಳೊಳಗೆ ಈ ಕುರಿತು ವರದಿ ಸಲ್ಲಿಸಿಸುವಂತೆ ಆದೇಶಿಸಿತು.

ಈ ಮಹತ್ವದ ವಿಷಯದಲ್ಲಿ ನಾವು ಎಲ್ಲ ರಾಜ್ಯ ಸರ್ಕಾರಗಳ ಗೃಹ ಕಾರ್ಯದರ್ಶಿಗಳಿಂದ ಅಫಿದವಿತ್ತು ಬಯಸಿದ್ದೇವೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೆಹರ್ ಅವರಿದ್ದ ನ್ಯಾಯಪೀಠ ಹೇಳಿದೆ.

ನ್ಯಾಯಪೀಠದ ನೋಟಿಸಿಗೆ ಉತ್ತರಿಸಲು ವಿಫಲವಾದಲ್ಲಿ ಗೃಹ ಕಾರ್ಯದರ್ಶಿಗಳಿಗೆ ಸಮನ್ಸ್ ಕೊಡಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ.

2015 ಜನವರಿ ವೇಳೆಗೆ ದೇಶದಲ್ಲಿ 4.73 ಲಕ್ಷ ಪೊಲೀಸ್ ಹುದ್ದೆಗಳು ಖಾಲಿಯಾಗಿದ್ದವು ಎಂದು ಅಂಕಿಅಂಶವೊಂದು ಹೇಳುತ್ತದೆ. ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದ ಇರುವ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ ಎಂಬ ವಾದವನ್ನು ಕೋರ್ಟ್ ಪರಿಗಣಿಸಿದೆ.

ವಕೀಲ ಮನಿಶ್ ಕುಮಾರ್ ಎಂಬವರು ದೇಶದ ಪೊಲೀಸ್ ಬಲದ ದುಃಸ್ಥಿತಿ ಹಾಗೂ ದೇಶದ ಕಾನೂನು ಮತ್ತು ಸುವ್ಯವಸ್ಥೆ ದಿಕ್ಕು ತಪ್ಪಿರುವ ಬಗ್ಗೆ ಮಾಡಿಕೊಂಡಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿ, ಈ ರೀತಿ ಪ್ರತಿಕ್ರಿಯಿಸಿತು.

ಅಚ್ಚರಿಯೆಂದರೆ, ದೇಶದ ರಾಜ್ಯಗಳಲ್ಲಿ ಶೇ 24ರಷ್ಟು ಮಂಜೂರಾದ ಪೊಲೀಸ್ ಹುದ್ದೆಗಳು ಖಾಲಿ ಬಿದ್ದಿವೆ. 2015ರಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 5.42 ಲಕ್ಷ ಪೊಲೀಸರ ಕೊರತೆ ಇತ್ತೆಂದು ಕುಮಾರ್ ಹೇಳಿದ್ದಾರೆ.