ಜೈಲುಗಳಲ್ಲಿ ಶಂಕಾಸ್ಪದ ಸಾವು ಪ್ರಕರಣಗಳಲ್ಲಿ ಪರಿಹಾರ ಪ್ರಸ್ತಾಪ

ಜೈಲು ಸುಧಾರಣೆ ನಿಟ್ಟಿನಲ್ಲಿ ಸುಪ್ರೀಂ ಮಹತ್ವದ ಆದೇಶ

ನವದೆಹಲಿ : ಕಾರಾಗೃಹಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಎಲ್ಲಾ ಕಾರಾಹಗೃಹಗಳಲ್ಲಿರುವ ಕೈದಿಗಳು ತಮ್ಮ ವಕೀಲರು ಹಾಗೂ ಕುಟುಂಬ ಸದಸ್ಯರ ಜತೆ ಮಾತನಾಡಲು ಅನುಕೂಲ ಕಲ್ಪಿಸಲು ದೂರವಾಣಿ ಮತ್ತು ವೀಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಒದಗಿಸಬೇಕೆಂದು ಹೇಳಿದೆ.

ಜೈಲುಗಳಲ್ಲಿ ಕೈದಿಗಳ ಅಸ್ವಾಭಾವಿಕ  ಸಾವು ಪ್ರಕರಣಗಳ ಹಿನ್ನೆಲೆಯಲ್ಲಿ 2012 ಹಾಗೂ 2015ರ ನಡುವೆ ಜೈಲುಗಳಲ್ಲಿ  ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾದ  551 ಕೈದಿಗಳ ಕುಟುಂಬಗಳಿಗೆ ಪರಿಹಾರ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ

ನ್ಯಾಷನಲ್ ಕ್ರ್ರೈಮ್ ರೆಕಾಡ್ರ್ಸ್ ಡಾಟಾದಲ್ಲಿರುವ ಮಾಹಿತಿಯಂತೆ  ಶಂಕಾಸ್ಪದ ಸಾವು ಪ್ರಕರಣಗಳನ್ನು  ಪರಿಗಣಿಸಿ,ಸಾವಿಗೀಡಾದವರ ಸಂಬಂಧಿಗಳನ್ನು ಗುರುತಿಸಿ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವಿಚಾರಣೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು  ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ.

ಕೈದಿಗಳಿಗೆ ಯಾವುದೇ ಸೌಕರ್ಯವೊದಗಿಸದೆ ಅವರನ್ನು ಅಮಾನವೀಯ ದೃಷ್ಟಿಯಿಂದ ನೋಡದಂತೆಯೂ ಜಸ್ಟಿಸ್ ಎಂ ಬಿ ಲೋಕೂರ್ ನೇತೃತ್ವದ ಪೀಠ ಹೇಳಿದೆ.

“ಕೈದಿಗಳಿಗೆ ಉತ್ತಮ ಸೌಕರ್ಯವೊದಗಿಸುವ ತಮ್ಮ ಜವಾಬ್ದಾರಿಯಿಂದ ಯಾವ ಸರಕಾರವೂ ನುಣುಚಿಕೊಳ್ಳುವಂತಿಲ್ಲ. ಸರಕಾರಗಳು ಕೈದಿಗಳನ್ನು ಬಂಧಿಸುವ  ಯಾ ವಶಪಡಿಸಿಕೊಳ್ಳುವ ಮುನ್ನ, ಮುಖ್ಯವಾಗಿ ನ್ಯಾಯಾಂಗ ಬಂಧನದಲ್ಲಿರುವವರ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು” ಎಂದೂ ಹೇಳಿದೆ ಹಾಗೂ ತನ್ನ ಆದೇಶವನ್ನು ಜಾರಿಗೊಳಿಸಲು ಡಿಸೆಂಬರ್ 31,2017ರ ಗಡು ವಿಧಿಸಿದೆ.

2016ರಲ್ಲಿ  ಮಾಜಿ ಮುಖ್ಯ ನ್ಯಾಯಮೂರ್ತಿ ಆರ್ ಸಿ ಲಹೋಟಿ ಅವರು ಜೈಲುಗಳಲ್ಲಿರುವ ಅಮಾನವೀಯ  ಸ್ಥಿತಿಯನ್ನು ಹಾಗೂ ಹೆಚ್ಚುತ್ತಿರುವ ಕೈದಿಗಳ ಆತ್ಮಹತ್ಯೆ  ಪ್ರಕರಣಗಳ ಬಗ್ಗೆ  ವಿವರಿಸಿ ಪತ್ರ ಬರೆದ ನಂತರ ಸುಪ್ರೀಂ ಕೋರ್ಟ್ ಈ ವಿಚಾರ ಕೈಗೆತ್ತಿಕೊಂಡಿತ್ತು.

ರಾಜ್ಯಗಳು ಎಲ್ಲಾ ಜಾಮೀನು ಅರ್ಜಿಗಳನ್ನು ವಿರೋಧಿಸಬೇಕೆಂದೇನಿಲ್ಲ ಹಾಗೂ ತನಿಖೆ ಬಾಕಿಯಿರುವ ಪ್ರತಿಯೊಬ್ಬ ಆರೋಪಿತನ ರಿಮಾಂಡಿಗಾಗಿ ಬೇಡಿಕೆಯಿರಿಸುವಂತಿಲ್ಲ ಎಂದು ನ್ಯಾಯಾಲಯ  ಹೇಳಿದೆ.