ಯಡ್ಡಿ, ಡೀಕೆಶಿಗೆ ಕಂಟಕ

ಡಿನೋಟಿಫಿಕೇಶನ್, ಭ್ರಷ್ಟಾಚಾರ ಹಗರಣ

ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ :  ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ, ರಾಜ್ಯ ಇಂಧನ ಸಚಿವ  ಡಿ ಕೆ ಶಿವಕುಮಾರ್  ಹಾಗೂ ಕೆಲ ಸರಕಾರಿ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ಮತ್ತು ಭ್ರಷ್ಟಾಚಾರ ಆರೋಪಗಳ ಪ್ರಕರಣವನ್ನು  ರದ್ದುಗೊಳಿಸಿರುವುದರ ವಿರುದ್ಧ ದಾಖಲಿಸಲಾದ ಅಪೀಲೊಂದನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಒಪ್ಪಿದೆ. ಸರಕಾರಿ ಭೂಮಿಯ ಅಕ್ರಮ ಖರೀದಿ, ವರ್ಗಾವಣೆ ಮತ್ತು ಡಿನೋಟಿಫಿಕೇಶನ್ ನಡೆಸಿದ ಪ್ರಕರಣ ಇದಾಗಿದೆ.

ಕರ್ನಾಟಕ ಹೈಕೋರ್ಟಿನ ಡಿಸೆಂಬರ್ 2015ರ ಆದೇಶದ ವಿರುದ್ಧ ಕಬ್ಬಾಳೆ ಗೌಡ ಎಂಬವರು ದಾಖಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ಹಿನ್ನೆಲೆಯಲ್ಲಿ ಜಸ್ಟಿಸ್ ಎ ಕೆ ಸಿಕ್ರಿ ಅವರ ನೇತೃತ್ವದ ಪೀಠ  ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಈ ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿಸಿ ಫೆಬ್ರವರಿ 2012ರಲ್ಲಿ ವಿಚಾರಣಾ ನ್ಯಾಯಾಲಯವೊಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಈ ಸಂಪೂರ್ಣ ಪ್ರಕರಣ ಒಂದು ದೊಡ್ಡ ಕ್ರಿಮಿನಲ್ ಸಂಚಾಗಿತ್ತೆಂಬುದನ್ನು ಮನಗಾಣಲು ಹೈಕೋರ್ಟ್ ಸಂಪೂರ್ಣ ವಿಫಲವಾಗಿತ್ತು ಎಂದು  ಕಬ್ಬಾಳೆ ಗೌಡ ಪರ ವಕೀಲರು ಸುಪ್ರೀಂ ಕೋರ್ಟ್ ಮುಂದೆ ವಾದಿಸಿದ್ದರು

ಸುಮಾರು ಐದು ಎಕರೆಗಳಿಗಿಂತ ಹೆಚ್ಚು ಇದ್ದ ಈ ಭೂಮಿಯನ್ನು ಖರೀದಿಸಿದ್ದವರು ಅದನ್ನು ಕೃಷಿ ಉದ್ದೇಶದ ಭೂಮಿಯಿಂದ ಕೈಗಾರಿಕಾ ಉದ್ದೇಶ ಭೂಮಿಯನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದರು. ಆದರೆ ಬಿಡಿಎ ಅದನ್ನು 1986ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಆದರೂ 2003ರಲ್ಲಿ ಆಗ ನಗರಾಭಿವೃದ್ಧಿ ಸಚಿವರಾಗಿದ್ದ ಶಿವಕುಮಾರ್ ಅದನ್ನು ರೂ 1.62 ಕೋಟಿಗೆ ಖರೀದಿಸಿದ್ದರು. ಈ ಭೂ ನೋಂದಣಿ ನಡೆಸಿದ್ದ ಆಗಿನ ಸಬ್-ರಿಜಿಸ್ಟ್ರಾರ್ ಹಮೀದ್ ಅಲಿ ಕೂಡ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿದ್ದಾರೆ.

2004ರಲ್ಲಿ ಇನ್ನೊಬ್ಬ  ವಿಶೇಷ ಜಿಲ್ಲಾಧಿಕಾರಿ ಅದನ್ನು ಕೈಗಾರಿಕಾ ಉದ್ದೇಶದಿಂದ ವಸತಿ ಉದ್ದೇಶದ ಭೂಮಿಯನ್ನಾಗಿ ಪರಿವರ್ತಿಸಿದ್ದರು. ಮುಂದೆ 2015ರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಯಡ್ಯೂರಪ್ಪ ಈ ಭೂಮಿಯನ್ನು ಏಕಪಕ್ಷೀಯವಾಗಿ ಡಿನೋಟಿಫಿಕೇಶನ್ ಮಾಡಿದ್ದರು. ಕಡತವನ್ನು ಡಿನೋಟಿಫಿಕೇಶನ್ ಸಮಿತಿಯ ಮುಂದೆ ಹಾಜರುಪಡಿಸಬೇಕೆಂದು ತಿಳಿಸಿದ ಅಧಿಕಾರಿಯನ್ನೂ ವರ್ಗಾವಣೆಗೊಳಿಸಲಾಗಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.

 

LEAVE A REPLY