`ಸೆಝ್’ ಭೂಮಿ ರೈತರಿಗೆ ಹಿಂದಿರುಗಿಸಲು ಸುಪ್ರೀಂ ನೋಟಿಸ್

ನವದೆಹಲಿ : ವಿಶೇಷ ಆರ್ಥಿಕ ವಲಯ(ಎಸ್‍ಇಝಡ್)ಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿರುವ ಹಾಗೂ ಇನ್ನೂ ಉಪಯೋಗಿಸಿಕೊಳ್ಳದ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ಮಾಡಿಕೊಂಡಿರುವ ಮನವಿಯೊಂದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ನಿನ್ನೆ ಕೇಂದ್ರ ಮತ್ತು ಕರ್ನಾಟಕ ಸಹಿತ ಏಳು ರಾಜ್ಯಗಳಿಗೆ ನೋಟಿಸು ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಜೆ ಎಸ್ ಕೆಹರ್ ಅಧ್ಯಕ್ಷತೆಯ ತ್ರಿಸದಸ್ಯರ ಪೀಠದೆದುರು ಈ ಅರ್ಜಿ ವಿಚಾರಣೆಯಾಗುತ್ತಿದೆ. ಅರ್ಜಿ ವಿಚಾರಿಸಿದ ಪೀಠ ಕೇಂದ್ರ ಸರ್ಕಾರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಲ ಮತ್ತು ಪಂಜಾಬಿಗೆ ನೋಟಿಸು ಜಾರಿ ಮಾಡಿ ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡಬೇಕೆಂದು ನಿರ್ದೇಶಿಸಿದೆ. ಸರ್ಕಾರೇತರ `ಸೆಝ್’ ರೈತರ ರಕ್ಷಣಾ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿತ್ತು.

ಕೆಲವು ವರ್ಷಗಳ ಹಿಂದೆ ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ವಶಪಡಿಸಿಕೊಳ್ಳಲಾಗಿದ್ದರೂ, ಈ ಭೂಮಿಯಲ್ಲಿ ಇದುವರೆಗೆ ಏನೂ ಮಾಡಿಲ್ಲ. ಆದ್ದರಿಂದ ರೈತರಿಗೆ ಈ ಭೂಮಿ ಹಿಂದಿರುಗಿಸುವುದರೊಂದಿಗೆ ಪರಿಹಾರವನ್ನೂ ನೀಡಬೇಕೆಂದು ಅರ್ಜಿದಾರರ ಪರವಾದಿ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೀಸ್ ಸವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

“ಬುಡಕಟ್ಟು ಜನರು, ರೈತರು ಮತ್ತು ಸಮಾಜದ ನಿರ್ಬಲ ವ್ಯಕ್ತಿಗಳ ಭೂಮಿಯನ್ನು ಸ್ವಾಧೀನಪಡಿಸಲಾಗಿದೆ. ಆದರೆ ಈ ಎಲ್ಲ ವರ್ಗದ ಜನರು ಸರ್ಕಾರಗಳ ಅನಪೇಕ್ಷಿತ ಭೂಸ್ವಾಧೀನ ನೀತಿಯಿಂದ ತೀವ್ರ ತೊಂದರೆಗೀಡಾಗಿದ್ದಾರೆ” ಎಂದವರು ವಿವರಿಸಿದರು.

2006ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿರುವ ಭೂಮಿಯಲ್ಲಿ 2016ರವರೆಗೂ ಯಾವುದೇ ಕೆಲಸ ಆರಂಭಿಸಿಲ್ಲ ಎಂದು ರೈತರು, ಕಾರ್ಮಿಕರು ಮತ್ತು ಇತರರ ಪರವಾಗಿ ನ್ಯಾಯಾಲಯಕ್ಕೆ ಬಿನ್ನವಿಸಲಾಗಿದೆ.

84 ಸೆಝ್‍ಗಳಲ್ಲಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಛತ್ತೀಸ್‍ಗಢದಲ್ಲಿ ಬಹುತೇಕ ಭೂಮಿ ಬುಡಕಟ್ಟು ಜನರು, ದಲಿತರು ಮತ್ತು ಬಡ ರೈತರಿಗೆ ಸೇರಿದ್ದಾಗಿವೆ.