ವಕೀಲರ ದುಬಾರಿ ಶುಲ್ಕಕ್ಕೆ ಮಿತಿ ಹೇರಲು ಮುಂದಾದ ಸುಪ್ರೀಂ

ನವದೆಹಲಿ : ಜನಸಾಮಾನ್ಯರಿಗೆ ನ್ಯಾಯ ಕೈಗೆಟಕುವಂತೆ ಮಾಡುವಲ್ಲಿ  ಅಡ್ಡಿಯೆಂದು ಪರಿಗಣಿತವಾಗಿರುವ ವಕೀಲರ ದುಬಾರಿ ಶುಲ್ಕದ ಮೇಲೆ ಕಡಿವಾಣ ಹಾಕಲು ನಿಯಂತ್ರಣ ವ್ಯವಸ್ಥೆಯೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

“ಅನ್ಯಾಯಕ್ಕೊಳಗಾದವರಿಗೆ ಶೀಘ್ರ ಹಾಗೂ ಮಿತದರದಲ್ಲಿ ನ್ಯಾಯವೊದಗಿಸಿ ಅವರ ಹಕ್ಕುಗಳನ್ನು ರಕ್ಷಿಸುವುದೇ  ನ್ಯಾಯಾಲಯ ಹಾಗೂ ವಕೀಲರುಗಳ ಧರ್ಮವಾಗಿದೆ. ಎಲ್ಲರಿಗೂ ಸಮಾನ ಅವಕಾಶ ಹಾಗೂ ಎಲ್ಲರಿಗೂ ನ್ಯಾಯ ಕೈಗೆಟಕುವಂತೆ ಮಾಡುವ ನಿಟ್ಟಿನಲ್ಲಿ ಸಂವಿಧಾನದ 39ಎ ವಿಧಿಯನ್ವಯ ತಮ್ಮ ಕರ್ತವ್ಯಗಳನ್ನು ವಕೀಲರು ಮನಗಾಣಬೇಕು” ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಕಾನೂನು ಆಯೋಗವು ತನ್ನ 131ನೇ ಹಾಗೂ 266ನೇ ವರದಿಗಳಲ್ಲಿ ಮಾಡಿದ ಶಿಫಾರಸುಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಕಾನೂನು ವೃತ್ತಿಯನ್ನು ನಡೆಸುವªರÀ ಶುಲ್ಕವನ್ನು ನಿಗದಿ ಪಡಿಸುವುದು ಸಂಸತ್ತಿನ ಕರ್ತವ್ಯ ಎಂದು ಹೇಳಿದರಲ್ಲದೆ ಶುಲ್ಕಕ್ಕೆ ಒಂದು ಮಿತಿ ಹೇರುವ ಕ್ರಮವನ್ನು ಮೊದಲು ಕೈಗೊಳ್ಳಬೇಕು ಎಂದು ಹೇಳಿದರು.

ತೆಲಂಗಣಾದ ಬಿ ಸುನೀತಾ ಅವರ ವಿರುದ್ಧ ವಕೀಲರೊಬ್ಬರು ದಾಖಲಿಸಿದ್ದ ಚೆಕ್ ಅಮಾನ್ಯ ಪ್ರಕರಣವನ್ನು ರದ್ದುಪಡಿಸುವ ವೇಳೆ ನ್ಯಾಯಾಲಯ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.  ತಾನು ಈಗಾಗಲೇ ವಕೀಲರ ಶುಲ್ಕ ಪಾವತಿಸಿದ್ದರೂ  ರೂ 10 ಲಕ್ಷ ಮೊತ್ತದ ಚೆಕ್ಕಿಗೆ ಮತ್ತೆ ಸಹಿ ಹಾಕುವಂತ ಮಾಡಲಾಗಿತ್ತು ಎಂದು ಆಕೆ ದೂರಿದ್ದರು. ಆಕೆ ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿಯಲ್ಲಿ ದಾಖಲಿಸಿದ್ದ  ಪ್ರಕರಣದಲ್ಲಿ ಜಯ ಸಾಧಿಸಿದ್ದಕ್ಕಾಗಿ ಆಕೆಗೆ ದೊರಕಿದ ಹಣದಲ್ಲಿ ತನ್ನ ಪಾಲಿನ ಶುಲ್ಕವನ್ನು ವಕೀಲರು ಕೇಳಿದ್ದರು. ವಕೀಲರರ ನಡವಳಿಕೆ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

 

LEAVE A REPLY