ರೂ 500 ಕೋಟಿಗೂ ಅಧಿಕ ಸಾಲ ಬಾಕಿಯಿರಿಸಿರುವ ಕಾರ್ಪೊರೇಟುಗಳ ಪಟ್ಟಿ ನೀಡಲು ಕೇಂದ್ರಕ್ಕೆ ಸುಪ್ರೀಂ ಆಜ್ಞೆ

ನವದೆಹಲಿ :  ಬ್ಯಾಂಕುಗಳಿಗೆ ರೂ 500 ಕೋಟಿಗೂ ಅಧಿಕ ಸಾಲದ ಮೊತ್ತ ಬಾಕಿಯಿರಿಸಿರುವ ಕಾರ್ಪೊರೇಟ್ ಸಂಸ್ಥೆಗಳ ಪಟ್ಟಿಯನ್ನು ತನಗೆ ನೀಡುವಂತೆ ಮಂಗಳವಾರದಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ  ಹೇಳಿದೆ. ಈ ಕೋರ್ಟ್ ನಿರ್ದೇಶನದಂತೆ ಕಳೆದ ಹತ್ತು ವರ್ಷಗಳಿಂದ ಸಾಲ ವಸೂಲಾತಿ  ನ್ಯಾಯಾಧೀಕರಣದಲ್ಲಿ ಬಾಕಿಯಿರುವ ಪ್ರಕರಣಗಳ ಬಗ್ಗೆಯೂ ಮಾಹಿತಿಯನ್ನು ಸರಕಾರ ನ್ಯಾಯಾಲಯಕ್ಕೆ ನೀಡಬೇಕಿದೆ.

ಸಾಲ ವಸೂಲಾತಿ ನ್ಯಾಯಾಧಿಕರಣ ಮತ್ತು ಸಂಬಂಧಿತ ಮೇಲ್ಮನವಿ ಸಂಸ್ಥೆಗಳಲ್ಲಿರುವ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲದ ಕೊರತೆಯನ್ನು ಗಂಭೀರಾಗಿ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕುರ್ ನೇತೃತ್ವದ ಪೀಠವು ಮೂಲಸೌಕರ್ಯಗಳನ್ನು ಹೆಚ್ಚಿಸದೇ ಇದ್ದಲ್ಲಿ  ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಯಾವುದೇ ಕ್ರಮ ಕೈಗೊಂಡರೂ ಅದು ಫಲ ನೀಡದು ಎಂದು ಹೇಳಿದೆ.

ನ್ಯಾಯಾಧಿಕರಣ ಮತ್ತು ಸಂಬಂಧಿತ ಮೇಲ್ಮನವಿ ಸಂಸ್ಥೆಗಳಲ್ಲಿನ ಮೂಲಭೂತ ಸೌಕರ್ಯಗಳನ್ನು  ಹೆಚ್ಚಿಸಲು ಯಾವ ಕ್ರಮ ಕೈಗೊಳ್ಳಲಾಗಿದೆಯೆಂದೂ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ರೂ 5 ಲಕ್ಷ  ಕೋಟಿ ಮೊತ್ತಕ್ಕೆ ಸಂಬಂಧಿಸಿದಂತೆ 70,000ಕ್ಕೂ ಅಧಿಕ ಪ್ರಕರಣಗಳು  ಸಾಲ ವಸೂಲಾತಿ ನ್ಯಾಯಾಧಿಕರಣದಲ್ಲಿ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಬಾಕಿಯಿದೆ  ಎಂದು ಕೇಂದ್ರ ಇತ್ತೀಚೆಗೆ ಸಲ್ಲಿಸಿದ್ದ ಅಫಿಡವಿಟ್ ತಿಳಿಸಿತ್ತು.