ನಗದು ಬಿಕ್ಕಟ್ಟಿದ್ದರೆ ಕೆಲವರಲ್ಲಿ ಕೋಟ್ಯಂತರ ರೂ ಹೊಸ ಕರೆನ್ಸಿ ಎಲ್ಲಿಂದ ಬಂತು : ಸುಪ್ರೀಂ ಪ್ರಶ್ನೆ

ನವದೆಹಲಿ : ನೋಟು ನಿಷೇಧದ ಬಳಿಕ ಗ್ರಾಹಕರು ಬ್ಯಾಂಕುಗಳಿಂದ ವಾರಕ್ಕೆ 24,000 ರೂ ಪಡೆಯುವಲ್ಲಿಯೂ ಸಮಸ್ಯೆಯಾಗಿರುವ ಈ ದಿನಗಳಲ್ಲಿ ಕೆಲವರ ಕೈಯಲ್ಲಿ ರಾಶಿರಾಶಿ ಹೊಸ ನೋಟುಗಳು ಹೇಗೆ ಬಂದಿವೆ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಎ ಎಂ ಖಾನ್ವಿಲ್ಕರ್ ಮತ್ತು ನ್ಯಾ ಚಂದ್ರಾಚೂಡರಿದ್ದ ನ್ಯಾಯಪೀಠ ಸರ್ಕಾರಕ್ಕೆ ಸವಾಲೆಸೆದಿದೆ.

“ಪ್ರತಿದಿನ ದೇಶದಲ್ಲಿ ಕೋಟ್ಯಂತರ ರೂ ಬೆಲೆಬಾಳುವ ಹೊಸ ಕರೆನ್ಸಿ ಜಪ್ತಿ ಮಾಡಲಾಗುತ್ತಿದೆ. ಇಷ್ಟಿದ್ದ ಮೇಲೂ ನೀವು ನಗದು ಬಿಕ್ಕಟ್ಟು ಎನ್ನುತ್ತಿದ್ದೀರಿ. ಬಿಕ್ಕಟ್ಟು ಯಾರಿಗೆ ತಲೆದೋರಿದೆ ? ಪ್ರತಿಯೊಬ್ಬರಿಗೂ ವಾರಕ್ಕೆ 24,000 ರೂ ನೀಡಲಾಗುತ್ತಿಲ್ಲ ಎಂದು ಹೇಳುತ್ತಿದ್ದೀರಿ” ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರಿದ್ದ ಮೂವರ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿ, ಅಟಾರ್ನಿ ಜನರಲ್ ಮುಕುಲ್ ರಸ್ತೋಗಿಯನ್ನು ತರಾಟೆಗೆ ತೆಗೆದುಕೊಂಡಿದೆ.

“ಸರ್ಕಾರ ಮುದ್ರಿಸಿರುವ 5 ಲಕ್ಷ ಕೋಟಿ ರೂ ಹೊಸ ಕರೆನ್ಸಿ ಇದೇ ರೀತಿ ಸೋರಿಹೋಗಿದೆಯೇ ? ಯಾಕೆಂದರೆ, ದೇಶವಾಸಿಗಳು ತಮ್ಮಲ್ಲಿ ಹಣವಿಲ್ಲ, ಹಣಕ್ಕಾಗಿ ನಿತ್ಯ ಪರದಾಡುವಂತಾಗಿದೆ ಎಂದು ದೂರು ನೀಡುತ್ತಿದ್ದಾರೆ. ಅದಕ್ಕಾಗಿ ಸರ್ಕಾರವನ್ನು ಪ್ರಶ್ನಿಸಬೇಕಾಗಿದೆ” ಎಂದು ನ್ಯಾಯಪೀಠ ಹೇಳಿದೆ.