ಮಂಗಳೂರಿಗೆ ಲಕ್ಯಾ ಡ್ಯಾಮಿನಿಂದ 3 ಎಂಜಿಡಿ ನೀರು : ಸುಪ್ರೀಂ ಅಸ್ತು

ನಮ್ಮ ಪ್ರತಿನಿಧಿ ವರದಿ

ಮಂಗಳೂರು :  ಮಹತ್ವದ ಬೆಳವಣಿಗೆಯೊಂದರಲ್ಲಿ ಕುದುರೆಮುಖದ ಲಕ್ಯಾ ಅಣೆಕಟ್ಟಿನಿಂದ  3 ಎಂಜಿಡಿ ನೀರು ಎತ್ತಲು ಸುಪ್ರೀಂ ಕೋಟ್ ಮಂಗಳೂರು ಮಹಾನಗರ ಪಾಲಿಕೆಗೆ ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

ಲಕ್ಯಾ ಅಣೆಕಟ್ಟಿನಿಂದ ಮನಪಾ ನೀರು ಕೇಳಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಮಿತಿಯೆಂದು ಅಲ್ಲಿನ ಪ್ರದೇಶಕ್ಕೆ ಎರಡು ಬಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿತ್ತು. ನಂತರ ಪರಿಸರ ಮತ್ತು ಅರಣ್ಯ ಇಲಾಖೆಗಳು ನೀರು ಎತ್ತಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಬಂದಿದೆ.

ಈ ಆದೇಶ ಪ್ರತಿ ಕೈಸೇರುತ್ತಿದ್ದಂತೆಯೇ ಲಕ್ಯಾ ಅಣೆಕಟ್ಟಿನಿಂದ ನೀರು ಎತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಮೇಂiÀiರ್ ಕವಿತಾ ಸನಿಲ್ ಹೇಳಿದ್ದಾರೆ.

ಪ್ರಸಕ್ತ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಹಾಗೂ ಮಂಗಳೂರು ಇನ್ನೊಂದು ಜಲಕ್ಷಾಮದ ಭೀತಿ ಎದುರಿಸುತ್ತಿರುವುದರಿಂದ ಸುಪ್ರೀಂ ಕೋರ್ಟಿನ ಈ ಆದೇಶ ವರದಾನವಾಗಿ ಪರಿಣಮಿಸಿದೆ.

ಕಳೆದ ವರ್ಷ ಎಪ್ರಿಲ್, ಮೇ ತಿಂಗಳಲ್ಲಿ ಮಂಗಳೂರು ನಗರ ತೀವ್ರ ನೀರಿನ ಕೊರತೆ ಎದುರಿಸಿದ್ದ ಸಂದರ್ಭ ಅಂದಿನ ಮೇಯರ್ ಹರಿನಾಥ್ ಕೂಡ ಲಕ್ಯಾ ಅಣೆಕಟ್ಟಿನ ನೀರನ್ನು ತರಲು ಸಾಕಷ್ಟು ಪ್ರಯತ್ನಿಸಿದ್ದರು.

ಇದೀಗ ಲಕ್ಯಾ ಅಣೆಕಟ್ಟಿನಿಂದ ನೀರು ಎತ್ತಬೇಕಾದಲ್ಲಿ ಅಲ್ಲಿ ಪಂಪ್ ಹೌಸ್ ವ್ಯವಸ್ಥೆ ಮತ್ತದಕ್ಕೆ ವಿದ್ಯುತ್ ಜೋಡಣೆಯ ಅಗತ್ಯವಿದ್ದು ಈ ಕಾರ್ಯಕ್ಕೆ ಕೂಡ ಅರಣ್ಯ ಮತ್ತು ಪರಿಸರ ಇಲಾಖೆಯ ಒಪ್ಪಿಗೆ ಪಡೆಯುವ ಅಗತ್ಯವಿದೆ.

ಈ ಖಾತೆಗಳು ಜಿಲ್ಲಾ ಉಸ್ತುವಾರಿ ಸಚಿವರ ಕೈಯ್ಯಲ್ಲಿರುವುದರಿಂದ ಮನಪಾಗೆ ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆ ಎದುರಾಗಬಹುದು ಎಂದು ಊಹಿಸಲಾಗಿದೆ. ಈ ಹಿಂದೆ ಅಲ್ಲಿ ಪಂಪ್ ಹೌಸ್ ಇದ್ದರೂ ಕುದುರೆಮುಖದಲ್ಲಿ ಗಣಿಗಾರಿಕೆ ನಿಲ್ಲಿಸಿದ ನಂತರ ಅದಕ್ಕೆ ಬೀಗ ಜಡಿಯಲಾಗಿತ್ತು.