10 ರೂ ನಾಣ್ಯ ಸ್ವೀಕರಿಸಲು ಸ್ಟೇಟ್ ಬ್ಯಾಂಕ್ ನಕಾರ

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಹತ್ತು ರೂ ನಾಣ್ಯವನ್ನು ಸ್ಥಗಿತಗೊಳಿಸಿಲ್ಲ. ಎಲ್ಲ ಬ್ಯಾಂಕುಗಳೂ ಈ ನಾಣ್ಯವನ್ನು ಸ್ವೀಕರಿಸಿ ಚಲಾವಣೆಯಲ್ಲಿಡಿ” ಎಂದು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟವಾಗಿ ಆದೇಶಿಸಿದ್ದರೂ ರಾಷ್ಟ್ರೀಯ ಬ್ಯಾಂಕಗಳ ಪ್ರಧಾನ ಎಂದೇ ಗುರುತಿಸಲ್ಪಡುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಾರವಾರದ ಪಿಕ್ಳೆ ರಸ್ತೆಯಲ್ಲಿರುವ ಶಾಖೆಯಲ್ಲಿಯೇ 10 ರೂ ನಾಣ್ಯ ಸ್ವೀಕರಿಸದೇ ಇರುವ ಆರೋಪ ಕೇಳಿಬಂದಿದೆ.

ಕಾರವಾರದ ಅಂಗವಿಕಲ ಸಗಟು ವ್ಯಾಪಾರಿ ಜಗದೀಶ ಬಿ ಕುರ್ತಕೋಟಿ ಅವರು ಬುಧವಾರ ಬ್ಯಾಂಕಗೆ ತೆರಳಿ 10 ರೂ ನಾಣ್ಯಗಳನ್ನು ನೀಡಿದ್ದಾರೆ. ಆದರೆ ಈ ನಾಣ್ಯವನ್ನು ಸ್ಟೇಟ್ ಬ್ಯಾಂಕಿನ ಕ್ಯಾಶಿಯರ್ ಸ್ವೀಕರಿಸಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ವಾದ ನಡೆಸಿದರೂ ಪ್ರಯೋಜನವಾಗಿಲ್ಲ. ಕುಟುಂಬದವರಿಗೆ ಹಣದ ಅವಶ್ಯಕತೆ ಇರುವುದರಿಂದ 1 ಸಾವಿರ ರೂ ಮೌಲ್ಯದ 10 ರೂ ನಾಣ್ಯವನ್ನು ಜಮಾ ಮಾಡಲು ಇನ್ನೊಮ್ಮೆ ಬ್ಯಾಂಕಿಗೆ ಮುಂದಾದಾಗಲೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಬ್ಯಾಂಕ್ ಮ್ಯಾನೇಜರ್ ಬಳಿ ತೆರಳಿದ ಅವರು, “ನಾನು 4 ವರ್ಷದಿಂದ ಇಲ್ಲಿ ಪಾನ್ ಬೀಡಾ ಸಗಟು ವ್ಯಾಪಾರ ಮಾಡುತ್ತಿದ್ದೇನೆ. ಪ್ರತಿ ಅಂಗಡಿಯಿಂದ 1 ವಾರದಿಂದ 5 ರಿಂದ 10 ನಾಣ್ಯ ನೀಡುತ್ತಿದ್ದಾರೆ. ನಾನು ನೀರಾಕರಿಸುತ್ತಿಲ್ಲ. ಆದರೆ ಬ್ಯಾಂಕಿಗೆ ಈ ಹಿಂದೆಯೂ 2 ಬಾರಿಗೆ ಬಂದಾಗ ನಿರಾಕರಿಸಿದ್ದಾರೆ” ಎಂದು ದೂರಿದರು.

ಬೇರೆ ಯಾವ ಹಣ ನನ್ನ ಬಳಿ ಇಲ್ಲ. ಕೂಡಲೇ ಹಣ ಜಮಾ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಆದರೆ ಇದನ್ನು ನಿರಾಕರಿಸಿದ ಮ್ಯಾನೇಜರ್ “ನಾವು ಹಣ ಸ್ವೀಕರಿಸುವುದಿಲ್ಲ. ಹಣ ಕೇವಲ ಚಲಾವಣೆಗೆ ಇರುವಂತದ್ದು. ಅದನ್ನು ಜಮಾ ಮಾಡಿಕೊಳ್ಳುವುದಿಲ್ಲ. ಕೇವಲ 100 ರೂ ಒಳಗೆ ಇದ್ದಲ್ಲಿ ಮಾತ್ರ ಜಮಾ ಮಾಡಿಕೊಳ್ಳುತ್ತೇವೆ” ಎಂದಿದ್ದಾರೆ.

ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಅವರನ್ನು ವಿಚಾರಿಸಿದಾಗ, “ನಾವು ಆರ್ ಬಿ ಐ ನಿಯಮದಂತೆ ಹಣ ಚಲಾವಣೆ ಮಾಡುತ್ತಿದ್ದೇವೆ. 10 ರೂ ನಾಣ್ಯ ಚಲಾವಣೆಗೆ ಮಾತ್ರವಿರುವಂತದ್ದು, ಅವರು ಸಂಗ್ರಹಿಸಿದ ಹಣವನ್ನು ಸ್ಥಳೀಯವಾಗಿ ಚಲಾವಣೆ ಮಾಡಬೇಕು. ಬ್ಯಾಂಕಿಗೆ ಜಮಾ ಮಾಡಿಕೊಳ್ಳುವುದಿಲ್ಲ” ಎಂದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.