ಮೊದಲು ತುಳುನಾಡನ್ನು ಉಳಿಸಿ, ನಂತರ ಕಂಬಳ

ಕಂಬಳ ಕ್ರೀಡೆ ಬಗ್ಗೆ ಬಹಳ ಆಸ್ತಕಿ ತೋರಿಸಿ ನ್ಯಾಯಾಲಯದಲ್ಲಿ ವಾದಿಸುತ್ತಿರುವ ಕಂಬಳ ಸಂಘಟನೆಯನ್ನು ಹೊಗಳಬೇಕೋ ತೆಗಳಬೇಕೋ ಎಂದು ತಿಳಿಯುತ್ತಿಲ್ಲ. ಕಂಬಳ ಕ್ರೀಡೆ ಅವಿಭಜಿತ ದ ಕ ಜಿಲ್ಲೆಯ ಇತಿಹಾಸ ಪ್ರಸಿದ್ಧ ಜಾನಪದ ಕ್ರೀಡೆ ಎಂಬುದು ಸತ್ಯ. ಆದರೆ ತಾವುಗಳು ಬರೀ ಕಂಬಳ ಕ್ರೀಡೆ ಬಗ್ಗೆ ಏಕೆ ಹೋರಾಟ ನಡೆಸುತ್ತಿದ್ದೀರ, ? ಕಲೆ., ಸಂಸ್ಕøತಿ, ಧಾರ್ಮಿಕ ಶ್ರದ್ಧೆಯನ್ನು ಹೊಂದಿರುವ ತುಳುನಾಡಿನ ಜನತೆಯ ಬಗ್ಗೆ ಯಾಕೆ ಮೌನವಾಗಿರುವಿರಿ ? ನಿಮಗೆ ಕಂಬಳ ಮುಖ್ಯವೋ ಹೊರತು ಇಲ್ಲಿನ ಜನರ ಅಗತ್ಯವಿಲ್ಲ ಎಂದು ತಿಳಿಯಬೇಕಾಗುತ್ತದೆ.

ಈಗ ನಡೆಯುತ್ತಿರುವ ಕಂಬಳವು ತುಳುನಾಡಿನ ಜನರ ಜಾನಪದ ಕ್ರೀಡೆಯಾಗಿ ಉಳಿದಿಲ್ಲ. ಅದು ಜೂಜಿನ ಕ್ರೀಡೆಯಾಗಿ ಮತಾಂತರವಾಗಿದೆ. ದೈವ ದೇವರುಗಳ ಹೆಸರಲ್ಲಿ ನಡೆದುಕೊಂಡ ಬರುತ್ತಿರುವ ಕಂಬಳದಲ್ಲಿಯೂ ಜೂಜು ತುಂಬಿ ತುಳುಕುತ್ತಿದೆ. ಕೆಲವು ಶ್ರೀಮಂತ ವ್ಯಕ್ತಿಗಳ ಪ್ರತಿಷ್ಠೆ ಕ್ರೀಡೆಯಾಗಿ ಮಾರ್ಪಟ್ಟಿದೆ. ಹಿಂದಿನ ಕಾಲದಲ್ಲಿ ರೈತರು ಸುಗ್ಗಿಯ ಬೇಸಾಯ ಮುಗಿದ ನಂತರ ತಮ್ಮ ಮನೋರಂಜನೆಗಾಗಿ ಕೋಣಗಳನ್ನು ಕಂಬಳ ಕೂಟಕ್ಕೆ ಕೊಂಡು ಹೋಗಿ ಓಡಿಸುತ್ತಿದ್ದರು. ಆದರೆ ಈಗ ಓಟದ ಕೋಣಗಳನ್ನು ಸಾಕುತ್ತಿರುವವರು ಎಷ್ಟು ಜನ ಬೇಸಾಯ ಮಾಡುತ್ತೀರಿ ?

ನಮ್ಮ ಕಂಬಳ ನಡೆದುಕೊಂಡು ಬರುವ ಭೂಮಿ ಉಳಿಯಬೇಕು. ಈ ಭೂಮಿಗಳನ್ನು ದೊಡ್ಡ ದೊಡ್ಡ ಕಂಪೆನಿಯವರು ಬಂದು ಪ್ರಗತಿಯ ಹೆಸರಿನಲ್ಲಿ ನುಂಗುತ್ತಿದ್ದಾರೆ. ಇದರ ಬಗ್ಗೆ ಚಕಾರವೆತ್ತದೆ, ಪ್ರತಿಭಟಿಸದೆ ಇರುವ ತಾವುಗಳು ಕಂಬಳದ ಬಗ್ಗೆ ವಾದಿಸುವುದು ನಮ್ಮ ತುಳುನಾಡಿಗೆ ಅಪಮಾನ. ಈ ನಮ್ಮ ಪವಿತ್ರ ಭೂಮಿಯನ್ನು ಕಂಪೆನಿಗಳು ನುಂಗುತ್ತಿರುವಾಗ ಮುಂದೆ ಕಂಬಳವನ್ನು ಆಕಾಶದಲ್ಲಿ ನಡೆಸುವೆವು ಎಂದು ತೀರ್ಮಾನಿಸಿದ್ದೀರಾ ? ನಿಮ್ಮ ದ್ವಂದ್ವ ನೀತಿಯನ್ನು ಬದಿಗಿಟ್ಟು ಮೊದಲು ಕಂಪೆನಿಗಳಿಂದ ನಮ್ಮ ಜಮೀನನ್ನು ಮುಕ್ತಗೊಳಿಸಿ. ಮತ್ತೆ ಕಂಬಳದ ಪರ ವಾದಿಸಲು  ಚಿಂತನೆ ಮಾಡಿ. ಈ ಮೂಲಕ ಈ ಮಣ್ಣಿನ ಋಣ ತೀರಿಸಲು ಮುಂದೆ ಬನ್ನಿ.

  • ಹರೀಶ್ ಕೆ ಕೋಟ್ಯಾನ್, ಎರ್ಮಾಳು