ಶಿರವಸ್ತ್ರ ಧರಿಸದೇ ರಸ್ತೆಗಿಳಿದ ಸೌದಿ ಮಹಿಳೆಯ ಬಂಧನ

ರಿಯಾಧ್ : ಮುಸ್ಲಿಂ ಮಹಿಳೆಯರು ಸಾಮಾನ್ಯವಾಗಿ ದರಿಸುವ ಶಿರವಸ್ತ್ರ ಧರಿಸದೆ ರಸ್ತೆಗಿಳಿದ ಸೌದಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ.  ಈ ಬಗ್ಗೆ ಆಕೆ ಟ್ವಿಟ್ಟರಿನಲ್ಲಿ ಘೋಷಿಸಿಕೊಂಡಿದ್ದಳಲ್ಲದೆ ತಾನು ಜಾಕೆಟ್ ಧರಿಸಿ ರಿಯಾಧ್ ನಗರದ ರಸ್ತೆಯೊಂದರಲ್ಲಿ ನವೆಂಬರಿನಲ್ಲಿ ಕ್ಲಿಕ್ಕಿಸಿದ ಫೋಟೋ ಕೂಡ ಪೋಸ್ಟ್ ಮಾಡಿದ್ದಳು.

ಆಕೆಯನ್ನು ಧರ್ಮನಿಂದೆ ಆರೋಪದ ಮೇಲೆ ಶಿಕ್ಷಿಸಬೇಕೆಂದು ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದ ಹಲವರು ಆಗ್ರಹಿಸಿದ್ದರು. ಮಲಕ್-ಅಲ್-ಶೆಹರಿ ಎಂಬ ಈ ಮಹಿಳೆಯನ್ನು ಆಕೆಯ ವಿರುದ್ಧ  ದೇಶದ ಧಾರ್ಮಿಕ ಪೊಲೀಸರಲ್ಲಿ ಅಧಿಕೃತ ದೂರು ನೀಡಿದ ಬಳಿಕ ಬಂಧಿಸಲಾಯಿತು. ಆಕೆ ಸಂಬಂಧವಿಲ್ಲದ ಪರುಷರೊಂದಿಗೆ ಅಕ್ರಮ ಸಂಬಂಧಗಳ ಬಗ್ಗೆ ಬಹಿರಂಗವಾಗಿ ಕೂಡ ಮಾತನಾಡಿದ್ದಾಳೆ ಎಂದಿರುವ ಪೊಲೀಸರು ಆಕೆಯನ್ನು ನೈತಿಕತೆಗೆ ವಿರುದ್ಧವಾಗಿ ನಡೆದುಕೊಂಡ ಆರೋಪದ ಮೇಲೆ  ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮನೆಯಿಂದ ಹೊರನಡೆಯುವಾಗ ಸೌದಿ ಮಹಿಳೆಯರು ತಮ್ಮ ಮೈಯ್ಯನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕಾಗಿದ್ದು, ತಮಗೆ ಸಂಬಂಧವಿಲ್ಲದ ಪರುಷರೊಡನೆ ಮಾತನಾಡುವ ಹಾಗಿಲ್ಲ ಹಾಗೂ ಡ್ರೈವಿಂಗ್ ಕೂಡ ಕಲಿಯುವ ಹಾಗಿಲ್ಲ.