ವಿಶ್ವ ಭದ್ರತೆಗೆ ಸೌದಿ ಅರೆಬಿಯಾದಿಂದ ಇರುವಷ್ಟು ಅಪಾಯ ಇರಾನದಿಂದಿಲ್ಲ

ಪ್ರಜಾತಂತ್ರ ಮೌಲ್ಯಗಳಿಗೆ ಕಿಂಚಿತ್ತಾದರೂ ಬೆಲೆ ಕೊಡುವ ಇರಾನ್ ಮತಾಂಧ ಸೌದಿ ಸರ್ಕಾರಕ್ಕಿಂತಲೂ ಹೆಚ್ಚು ಸ್ನೇಹಮಯಿಯಾಗಿ ಕಂಡುಬರುತ್ತದೆ. ವಾಸ್ತವ ಎಂದರೆ ಸೌದಿ ಅರೇಬಿಯಾ ಮನುಕುಲ ವಿರೋಧಿ ದೇಶವಾಗಿದೆ.

  • ಜಾನ್ ಆರ್ ಬ್ರಾಡ್ಲಿ

ಸುನ್ನಿ ಮತ್ತು ಶಿಯಾ ಮುಸ್ಲಿಂ ಪಂಗಡಗಳ ದ್ವೇಷ ರಾಜಕಾರಣ ಮತ್ತು ಹಿಂಸಾತ್ಮಕ ಸೇಡಿನ ರಾಜಕಾರಣಕ್ಕೆ ಬಲಿಯಾಗಿರುವ ಇರಾಕ್, ಸಿರಿಯಾ ಮತ್ತು ಯಮೆನ್ ದೇಶಗಳ ನಗರಗಳಂತೆ ಸೌದಿ ಅರೇಬಿಯಾದ ಅವಾಮಿಯಾ ನಗರವೂ ಸಹ ಜರ್ಝರಿತವಾಗಿದೆ.

ಇಂದು ಅವಾಮಿಯಾ ನಗರ ಕೇವಲ ಹೆಸರಿಗೆ ಮಾತ್ರವೇ ಅಸ್ತಿತ್ವದಲ್ಲಿದೆ. ಇತ್ತೀಚೆಗೆ ಸೌದಿ ಸರ್ಕಾರ ಇಲ್ಲಿನ ಶಿಯಾ ಜನಾಂಗದ ಮೇಲೆ ಮಾರಣಾಂತಿಕ ದಾಳಿ ನಡೆಸುವ ಕೆಲವೇ ದಿನಗಳ ಮುನ್ನ ವಿಶ್ವಸಂಸ್ಥೆ ಅವಾಮಿಯಾ ನಗರಕ್ಕೆ ವಿಶಿಷ್ಟ ಸಂಸ್ಕøತಿ ಮತ್ತು ಧರ್ಮದ ಮಹತ್ವ ಇರುವ ಪ್ರದೇಶ ಎಂದು ವಿಶೇಷ ಸ್ಥಾನ ನೀಡಿದೆ.

ಆದರೆ ಇರಾನಿನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಕ್ಷುಲ್ಲಕ ಆರೋಪದ ಮೇಲೆ ಸೌದಿ ಸರ್ಕಾರ ಅವಾಮಿಯಾ ಜನತೆಯ ಮೇಲೆ ಎಲ್ಲ ರೀತಿಯ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಅಲ್ಲಿನ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ಮೂರು ವರ್ಷದ ಮಗುವನ್ನೂ ಸೇರಿದಂತೆ ಹತ್ತಾರು ಶಿಯಾಗಳು ವೈಮಾನಿಕ ದಾಳಿಗೆ ಬಲಿಯಾಗಿದ್ದಾರೆ. ನೂರಾರು ಯುವಕರನ್ನು ಬಂಧಿಸಲಾಗಿದೆ. ಐನೂರಕ್ಕೂ ಹೆಚ್ಚು ಮನೆಗಳನ್ನು ಧ್ವಂಸ ಮಾಡಲಾಗಿದೆ. ಉಳಿದ ಮನೆಗಳಲ್ಲಿದ್ದ ಎಂಟು ಸಾವಿರಕ್ಕೂ ಹೆಚ್ಚು ಜನರನ್ನು ಉಚ್ಚಾಟಿಸಲಾಗಿದೆ. ಇರಾನ್ ಮತ್ತು ಸಿರಿಯಾಗಳಲ್ಲಿ ವಹಾಬಿ ಮುಸ್ಲಿಮರು ಮಾಡುವಂತೆ ಇಲ್ಲಿಯೂ ಸಹ ಶಿಯಾ ಧರ್ಮಗುರು ನಿಮ್ರ್ ಅಲ್ ನಿಮ್ರ್ ಅವರ ಭಾವಚಿತ್ರದ ಮೇಲೆ ಸೌದಿ ಸೈನಿಕರು ಕುಣಿದು ಕುಪ್ಪಳಿಸುವ ಮೂಲಕ ಧ್ವಂಸಗೊಂಡ ನಗರದಲ್ಲಿ ರಂಜನೆ ಪಡೆಯುತ್ತಿದ್ದಾರೆ.

ಆದರೂ ಅಮೆರಿಕದ ಅಧ್ಯಕ್ಷ ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡಕ್ಕೆ ಇರಾನಿನ ಭಯೋತ್ಪಾದಕರೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಪಶ್ಚಿಮ ರಾಷ್ಟ್ರಗಳ ರಾಜಕೀಯ ನಾಯಕರುಗಳು ಸೌದಿ ಅರೇಬಿಯಾದ ಹತ್ಯಾಕಾಂಡಗಳಿಗೆ ಹಸಿರು ನಿಶಾನೆ ತೋರಿದ್ದು ಮಧ್ಯಪ್ರಾಚ್ಯದಲ್ಲಿ ಕಲೀಫೇಟ್ ಚಳುವಳಿ ಕ್ಷೀಣಿಸುತ್ತಿರುವಂತೆ ಸೌದಿಯ ಜಿಹಾದ್ ಹತ್ಯಾಕಾಂಡ ಪರಾಕಾಷ್ಟೆ ತಲುಪುವ ಸಾಧ್ಯತೆ ಇದೆ.

ಸೌದಿ ಅರೇಬಿಯಾದ ಆರ್ಥಿಕ ನೆರವು ಪಡೆಯುವ ವಹಾಬಿ ಪಂಥದ ಮಸೀದಿಗಳೇ ಹೆಚ್ಚಾಗಿರುವ ಪಶ್ಚಿಮ ಮತ್ತು ಯೂರೋಪ್ ರಾಷ್ಟ್ರಗಳಿಗೆ ಸಾವಿರಾರು ಮುಸ್ಲಿಂ ನಿರಾಶ್ರಿತರು ವಲಸೆ ಹೋಗುತ್ತಿರುವುದು ಮುಂಬರುವ ದಿನಗಳಲ್ಲಿ ಭೀಕರ ಪರಿಣಾಮಗಳನ್ನು ಉಂಟು ಮಾಡಲಿದೆ.  ಸೌದಿ ಅರೇಬಿಯಾದಲ್ಲಿ ವಹಾಬಿ ಮತ್ತು ಸುನ್ನಿಗಳು ಪ್ರಧಾನರಾಗಿದ್ದರೆ, ಶಿಯಾಗಳೇ ಪ್ರಧಾನವಾಗಿರುವ ಇರಾನ್ ಸಹ ಧರ್ಮಾಧಾರಿತ ದೇಶವಾದರೂ ಅಲ್ಲಿ ಇತರ ಧರ್ಮಗಳಿಗೆ ಅಸ್ತಿತ್ವ ಇದೆ. ವಹಾಬಿ ಮುಸ್ಲಿಮರಂತೆ ಶಿಯಾ ಮುಸ್ಲಿಮರು ಇತರ ಧರ್ಮೀಯರನ್ನು ಮತಾಂತರಗೊಳಿಸುವುದನ್ನು ಇಚ್ಚಿಸುವುದಿಲ್ಲ.

ಸಂದಿಗ್ಧ ಸಂದರ್ಭಗಳಲ್ಲಿ ಇರಾನ್ ಪಶ್ಚಿಮ ರಾಷ್ಟ್ರಗಳೊಡನೆ ಸಹಕಾರ ನೀಡಿದ್ದು ಅನೇಕ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತಿದೆ. ಪ್ರಜಾತಂತ್ರ ಮೌಲ್ಯಗಳಿಗೆ ಕಿಂಚಿತ್ತಾದರೂ ಬೆಲೆ ಕೊಡುವ ಇರಾನ್ ಮತಾಂಧ ಸೌದಿ ಸರ್ಕಾರಕ್ಕಿಂತಲೂ ಹೆಚ್ಚು ಸ್ನೇಹಮಯಿಯಾಗಿ ಕಂಡುಬರುತ್ತದೆ.

ಇರಾನ್ ಆಡಳಿತ ವ್ಯವಸ್ಥೆ ಮತ್ತು ಶಿಯಾ ಪಂಗಡದ ಹಿಜ್ಬೊಲ್ಲಾ ಪಡೆಗಳ ಸಹಾಯ ಇಲ್ಲದಿದ್ದರೆ ಇಂದು ಭಯೋತ್ಪಾದಕ ಸಂಘಟನೆಯಾದ ಐಸಿಸ್ ಅವಸಾನದ ಅಂಚಿನಲ್ಲಿರುತ್ತಿರಲಿಲ್ಲ ಎನ್ನುವುದನ್ನು ಗಮನಿಸಬೇಕು. ಅಮೆರಿಕ ಸಹ ಇರಾಕಿನಲ್ಲಿ ಇರಾನ್ ಪಡೆಗಳೊಡನೆ ಸೇರಿ ಐಸಿಸ್ ವಿರುದ್ಧ ಸಮರ ಸಾರಿದೆ. ಆದರೂ ವಿಶ್ವದ ಜನತೆಗೆ ಸೂಕ್ತ ಮಾಹಿತಿ ದೊರೆಯದೆ ಇರಲು ಕಾರಣವೆಂದರೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸೌದಿ ಮತ್ತು ಇಸ್ರೇಲ್ ದೇಶದ ಮತಾಂಧರನ್ನು ಪ್ರತಿನಿಧಿಸುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ಇರಾನ್ ಮುಖ್ಯ ತೊಡಕಾಗಿ ಕಾಣುತ್ತದೆ. ವಾಸ್ತವ ಎಂದರೆ ಸೌದಿ ಅರೇಬಿಯಾ ಮನುಕುಲ ವಿರೋಧಿ ದೇಶವಾಗಿದೆ.