ತಮಿಳುನಾಡು ಸೀಎಂ ಆಗಲು ಶಶಿಕಲಾ ಯೋಜನೆ : ಹೇಗೆ, ಯಾವಾಗ ಮತ್ತು ಯಾಕೆ ?

ಶಶಿಕಲಾ ವಿರುದ್ಧ ದಾಖಲಾಗಿರುವ ಆಸ್ತಿ ಅವ್ಯವಹಾರ ಕೇಸಿನ ಕಾನೂನು ತೊಂದರೆ ಆಕೆಯೇ ಸೀಎಂ ಆಗಬೇಕೆನ್ನುವುದಕ್ಕೆ ಮತ್ತೊಂದು ಬಲವಾದ ಕಾರಣವಾಗಿದೆ. ಈ ಕೇಸಿನಲ್ಲಿ ಶಶಿಕಲಾ ಖುಲಾಸೆಯಾದಲ್ಲಿ ಆಕೆಗೆ ಮತ್ತಷ್ಟು ಬೆಂಬಲ ಸಿಗಲಿದೆ ಎಂಬ ತರ್ಕವೂ ಆಕೆಯ ಪರವಾದಿಗಳಲ್ಲಿ ಬಲವಾಗಿದೆ.

ಶಶಿಕಲಾ, ತಮಿಳುನಾಡು ಸೀಎಂ ಆಗುವ ಬಲವಾದ ಸಾಧ್ಯತೆಗಳ ಕುರಿತು ಊಹೆಗಳು ಬಲಗೊಂಡಿವೆ.

ತಮಿಳುನಾಡು ಸೀಎಂ ಜಯಲಲಿತಾ ಸಾವಿನ ಬಳಿಕ ಆಕೆಯ ಆಪ್ತೆ-ರಾಜಕಾರಣಿ ವಿ ಕೆ ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತರಾಗಿದ್ದಾರೆ. ಇದೀಗ ಈಕೆಯನ್ನು ಸೀಎಂ ಹುದ್ದೆ ಅಲಂಕರಿಸುವಂತೆ ಪಕ್ಷದ ಹಿರಿಯ ನಾಯಕರು ಮನವೊಲಿಸರಾರಂಭಿಸಿದ್ದಾರೆ.

ತಮಿಳುನಾಡು ಸರ್ಕಾರದಲ್ಲಿ ಶಶಿಕಲಾ ಈಗ ಯಾವುದೇ ಹುದ್ದೆ ಹಿಡಿದಿಲ್ಲ. ಅಲ್ಲದೆ ಅವರು ಶಾಸಕಿಯೂ ಆಗಿಲ್ಲ. ಒಂದೊಮ್ಮೆ ಅವರು ಸೀಎಂ ಆಗಬೇಕಿದ್ದಲ್ಲಿ ತಕ್ಷಣ ಶಾಸಕಿಯಾಗಬೇಕಿದೆ. ಈಕೆಯನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದಿಂದ ತನ್ನ ನಾಯಕಿಯಾಗಿ ಆಯ್ಕೆ ಮಾಡಲು ಸಾಧ್ಯತೆಗಳಿವೆ. ಇದು ಸಾಧ್ಯವಾದಲ್ಲಿ ಈಕೆಗೆ ಸೀಎಂ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರಿಂದ ಸಾಧ್ಯವಿದೆ. ಈಕೆ ಸೀಎಂ ಆದಲ್ಲಿ ಆರು ತಿಂಗಳಲ್ಲಿ ಶಾಸಕಿಯಾಗಿ ಆಯ್ಕೆಯಾಗಬೇಕು.

ಈ ಯೋಜನೆ ಯಶಸ್ವಿಯಾದಲ್ಲಿ ಪ್ರಸಕ್ತ ಸೀಎಂ ಒ ಪನ್ನೀರಸೆಲ್ವಂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಸೆಲ್ವಂ ಈ ಹಿಂದೆ 2001 ಮತ್ತು 2014ರಲ್ಲಿ ಜಯಲಲಿತಾರಿಂದ ತೆರವಾದ ಸೀಎಂ ಸ್ಥಾನದಲ್ಲಿ ತಾತ್ಕಾಲಿಕ ಸೀಎಂ ಆಗಿದ್ದರು.

ಸದ್ಯ ಶಶಿಕಲಾ ಎಐಡಿಎಂಕೆಯೊಳಗಿಂದ ಅಥವಾ ಹೊರಗಡೆಯಿಂದ ಸ್ಪರ್ಧಿಸಿ, ಶಾಸಕಿಯಾಗಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಜಯಲಲಿತಾ ಸಾವಿನ ಬಳಿಕ ಆರ್ ಕೆ ನಗರ ಕ್ಷೇತ್ರ ಖಾಲಿ ಬಿದ್ದಿದ್ದು, ಉಪ-ಚುನಾವಣೆ ನಡೆಯಬೇಕಿದೆ.

ಆದಾಗ್ಯೂ, ಈಕೆ ಈ ಕ್ಷೇತ್ರ ಆಯ್ಕೆ ಮಾಡುವುದಿಲ್ಲ ಎಂಬ ಊಹೆಗಳು ದಟ್ಟವಾಗಿದ್ದು, ನಗರದ ಕ್ಷೇತ್ರವೊಂದರಲ್ಲಿ ಗೆಲುವು ಸಾಧಿಸುವ ಬಗ್ಗೆ ಆಕೆ ಪೂರ್ಣ ವಿಶ್ವಾಸವಿಟ್ಟುಕೊಂಡಿಲ್ಲ.

ಶಶಿಕಲಾರನ್ನು ದಕ್ಷಿಣ ಜಿಲ್ಲೆಯ ಕ್ಷೇತ್ರವೊಂದರಿಂದ ಕಣಕ್ಕಿಳಿಸಲು ಪಕ್ಷ ನಾಯಕರು ಮಾತುಕತೆ ನಡೆಸುತ್ತಿದ್ದಾರೆಂದು ಪಕ್ಷದೊಳಗಿನ ಮೂಲಗಳು ಹೇಳಿವೆ. ಅವರ ಅಸೆಂಬ್ಲಿ ಪ್ರವೇಶ ಸುಲಭಗೊಳಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಉದಯಕುಮಾರ್ ತನ್ನ ಸತ್ತೂರು ಕ್ಷೇತ್ರಕ್ಕೆ ರಾಜೀನಾಮೆ ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಥೆವಾರ್ ಮತ್ತು ಗೌಂಡರ್ ಮತಗಳು ಅಧಿಕಗೊಂಡಿದ್ದು, ಇಲ್ಲಿಂದ ಶಶಿಕಲಾರ ಆಯ್ಕೆ  ಸುಲಭವಾಗಲಿದೆ ಎಂಬ ನಂಬಿಕೆಯೂ ಬಲಗೊಂಡಿದೆ.

ಎರಡು ಕಾರಣಗಳಿಗಾಗಿ ಈಗ ಶಸಿಕಲಾ ತಮಿಳುನಾಡು ಸೀಎಂ ಆಗಬೇಕೆಂದು ಕೆಲವರು ಇಚ್ಚಿಸಿದ್ದಾರೆ. ಜಯಲಲಿತಾ ಸಾವಿನ ಬಳಿಕ ಆ ಸ್ಥಾನ ತುಂಬುವಲ್ಲಿ ಶಶಿಕಲಾ ಮಾತ್ರ ಸಮರ್ಥರಾಗಿದ್ದಾರೆ ಎಂಬುದು ಪ್ರಥಮ ನಿಲುವಾಗಿದೆ. ಕಳೆದ ಕೆಲವು ವಾರದಿಂದ ಶಶಿಕಲಾ ವಿರುದ್ಧ ಪಕ್ಷದ ಒಂದು ವರ್ಗದ ನಾಯಕರಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿದ್ದರೂ, ಈಕೆ ಎಐಡಿಎಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದ ಬಳಿಕ, ಆಕೆಯ ವಿರುದ್ಧ ದಟ್ಟೈಸಿದ್ದ ನಾಯಕರ ಕೋಪ ಸ್ವಲ್ಪ ಮಟ್ಟಿಗೆ ಶಮನಗೊಂಡಿದ್ದು, ಭವಿಷ್ಯದಲ್ಲಿ ಪಕ್ಷದೊಳಗೆ ಆಕೆಯ ಪರ ಬೆಂಬಲ ಹೆಚ್ಚುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಶಶಿಕಲಾ ವಿರುದ್ಧ ದಾಖಲಾಗಿರುವ ಆಸ್ತಿ ಅವ್ಯವಹಾರ ಕೇಸಿನ ಕಾನೂನು ತೊಂದರೆ ಆಕೆಯೇ ಸೀಎಂ ಆಗಬೇಕೆನ್ನುವುದಕ್ಕೆ ಮತ್ತೊಂದು ಬಲವಾದ ಕಾರಣವಾಗಿದೆ. ಈ ಕೇಸಿನಲ್ಲಿ ಶಶಿಕಲಾ ಖುಲಾಸೆಯಾದಲ್ಲಿ ಆಕೆಗೆ ಮತ್ತಷ್ಟು ಬೆಂಬಲ ಸಿಗಲಿದೆ ಎಂಬ ತರ್ಕವೂ ಆಕೆಯ ಪರವಾದಿಗಳಲ್ಲಿ ಬಲವಾಗಿದೆ. ಹಿಂದೆ, 2003ರಲ್ಲಿ ತಾನ್ಸಿ ಕೇಸಿನಲ್ಲಿ ಜಯಲಲಿತಾ ಖುಲಾಸೆ ಹೊಂದಿದಾಗ ಆಕೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ, ಅದ್ದೂರಿಯಾಗಿ ಮರಳಲಿ ಸೀಎಂ ಆದಂತೆ ಈ ಬಾರಿ ಶಶಿಕಲಾರ ರಾಜಕೀಯ ಭವಿಷ್ಯ ಬದಲಾಗಲಿದೆ ಎಂಬುದು ಆಕೆಯ ಪರವಾದಿಗಳ ನಂಬಿಕೆಯಾಗಿದೆ.