ಮನಪಾ ಸ್ವಯಂಘೋಷಿತ ಆಸ್ತಿತೆರಿಗೆ ಶೇ 15 ಹೆಚ್ಚಳ

ಗುರುವಾರ ನಡೆದ ವಿಶೇಷ ಸಭೆಯಲ್ಲಿ ಸ್ವಯಂ ಘೋಷಿತ ಆಸ್ತಿತೆರಿಗೆ ಹೆಚ್ಚಳ ಖಂಡಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಶೇ 15ರಷ್ಟು ಏರಿಕೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು.

ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಸಂಬಂಧ ತೀವ್ರ ವಾಗ್ವಾದ ನಡೆಯಿತು. ಮೇಯರ್ ಹರಿನಾಥ್ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಪ್ರತಿಪಕ್ಷ ಸದಸ್ಯೆ ರೂಪಾ ಡಿ ಬಂಗೇರ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ತಿಲಕ್ ರಾಜ್ ಮೊದಲಾದವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಮೇಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ತೆರಿಗೆ ಹೆಚ್ಚಳ ಮಾಡಬಾರದು. ಈ ಹಿಂದೆ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು ಎಂದರು.

ಈ ಸಂದರ್ಭ ಸಿಪಿಎಂ ಸದಸ್ಯ ದಯಾನಂದ ಶೆಟ್ಟಿ ಕೂಡಾ ತೆರಿಗೆ ಹೆಚ್ಚಳ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಂತೂ ಈ ತೆರಿಗೆ ಹೆಚ್ಚಳ ಪ್ರಸ್ತಾಪ ಮಾಜಿ ಮೇಯರ್ ಬಿಜೆಪಿಯ ಗಣೇಶ್ ಹೊಸಬೆಟ್ಟು ಅಧಿಕಾರದಲ್ಲಿದ್ದ ಸಂದರ್ಭ ಮಾಡಲಾಗಿತ್ತು ಎಂದಾಗ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ಪ್ರತೀ ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಂದಿ ತೆರಿಗೆದಾರರು ಈಗಾಗಲೇ ಹೆಚ್ಚಳಗೊಂಡ ತೆರಿಗೆ ಪಾವತಿ ಮಾಡಿದ್ದಾರೆ. ಈ ಬಗ್ಗೆ ಕಾನೂನೇ ಇದೆ. ಕಾನೂನನ್ನು ಯಾರೂ ಮೀರುವಂತಿಲ್ಲ. ಮೂರು ವರ್ಷಕ್ಕೊಮ್ಮೆ ಈ ಹಿಂದೆ ಕೂಡಾ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದರು.

ಈ ವೇಳೆ ಆಕ್ರೋಶಗೊಂಡ ಪ್ರೇಮಾನಂದ ಶೆಟ್ಟಿ, ಎಷ್ಟು ಮಂದಿ ತೆರಿಗೆ ಕಟ್ಟಿದ್ದಾರೆ. ಎಷ್ಟು ಮಂದಿ ಕಟ್ಟಲು ಬಾಕಿ ಇದೆ ಎಂಬ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.  ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಮುಂದಿನ ಸಭೆಯಲ್ಲಿ ಈ ಬಗ್ಗೆ ಸಮಗ್ರ ವಿವರ ನೀಡುವುದಾಗಿ ಹೇಳಿದರು.