ಅನುಷ್ಕಾ ಚಿತ್ರದಲ್ಲಿ ಸಾರಾ ?

ಸೈಫ್ ಆಲಿ ಖಾನ್-ಅಮೃತಾ ಸಿಂಗ್ ಪುತ್ರಿ ಸಾರಾ ಆಲಿ ಖಾನ್ ಈಗ `ಕೇದರನಾಥ’ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸುವ ಮೂಲಕ ಬಾಲಿವುಡ್ಡಿಗೆ ಎಂಟ್ರಿ ಕೊಡುತ್ತಿದ್ದು ಆ ಸಿನಿಮಾದ ಕೆಲವು ಭಾಗದ ಶೂಟಿಂಗ್ ಈಗಾಗಲೇ ನಡೆದಿದೆ. ವಿಶೇಷವೆಂದರೆ ಆ ಸಿನಿಮಾದ ಶೂಟಿಂಗ್ ಮುಗಿಯುವ ಮುನ್ನವೇ ಸಾರಾ ಮತ್ತೊಂದು ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾಳೆ. ಅನುಷ್ಕಾ ಶರ್ಮಾ ನಿರ್ಮಿಸಲಿರುವ ಮುಂಬರುವ ಚಿತ್ರಕ್ಕೆ ಸಾರಾ ನಾಯಕಿಯಾಗಲಿದ್ದಾಳೆ ಎನ್ನುವ ಸುದ್ದಿ ಬಾಲಿವುಡ್ಡಿನಿಂದ ಬಂದಿದೆ.

ಅನುಷ್ಕಾ ನಿರ್ಮಿಸಿರುವ `ಎನ್ ಹೆಚ್ 10′, `ಫಿಲೌರಿ’ ಚಿತ್ರಗಳಲ್ಲಿ ಸ್ವತಃ ಅನುಷ್ಕಾಳೇ ಅಭಿನಯಿಸಿದ್ದಳು. ಅನುಷ್ಕಾಳ ಈಗ ಸೆಟ್ಟೇರಿರುವ `ಪರಿ’ ಚಿತ್ರದಲ್ಲೂ ಅನುಷ್ಕಾಳೇ ಹಿರೋಯಿನ್. ಆದರೆ ಆ ಚಿತ್ರದ ನಂತರ ಅನುಷ್ಕಾ `ಕ್ರಿ ಆರ್ಜ್’ ನಿರ್ಮಾಣ ಸಂಸ್ಥೆಯ ಸಹಯೋಗದ ಜೊತೆ ನಿರ್ಮಿಸಲಿರುವ ಚಿತ್ರಕ್ಕೆ ಹಿರೋಯಿನ್ ಹುಡುಕಾಟದಲ್ಲಿದ್ದು ಅದಕ್ಕೆ ಸಾರಾಳ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಾರಾಗೂ ಸ್ಕ್ರಿಪ್ಟ್ ಇಷ್ಟವಾಗಿದೆಯಂತೆ.

`ಕೇದರನಾಥ’ ಚಿತ್ರದ ಡೈರೆಕ್ಟರ್ ತನ್ನ ಚಿತ್ರ ಮುಗಿಯುವವರೆಗೂ ಸಾರಾ ಬೇರ್ಯಾವ ಚಿತ್ರದಲ್ಲೂ ನಟಿಸುವ ಬಗ್ಗೆ ಓಕೆ ಸಿಗ್ನಲ್ ನೀಡಿರದಿದ್ದರೂ ಆ ಚಿತ್ರ ಉತ್ತರಭಾರತದ ಚಳಿಯಿಂದಾಗಿ ಮುಂದಕ್ಕೆ ಹೋಗಿದ್ದು ಅದಕ್ಕಾಗಿ ಸಾರಾ ಆ ಚಿತ್ರ ಮುಗಿಯುವವರೆಗೆ ಕಾಯಲು ಸಿದ್ಧಳಿಲ್ಲ, ಆಕೆ ಆ ಸಮಯದಲ್ಲಿ ಬೇರೆ ಚಿತ್ರದಲ್ಲೂ ನಟಿಸಲು ಮನಸ್ಸು ಮಾಡಿದ್ದಾಳೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.