ಎತ್ತಿನಹೊಳೆ ಯೋಜನೆ ವಿರೋಧಿಸಿ ಡಿ 10ರಿಂದ ಸಪ್ತಕ್ಷೇತ್ರ ರಥಯಾತ್ರೆ

ಮಂಗಳೂರು : ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕರಾವಳಿ ಜಿಲ್ಲೆಯ ಜನರ ಜೀವನದಿ ನೇತ್ರಾವತಿಯನ್ನು ಬರಡು ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಡಿ 10ರಿಂದ 12ರವರೆಗೆ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ನಡೆಯಲಿದೆ ಎಂದು ಎತ್ತಿನಹೊಳೆ ಸಂಯುಕ್ತ ಹೋರಾಟ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.

ಸಂಸದ ನಳಿನ್‍ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಈ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರೆ ನದಿಯ ನೀರನ್ನು ಕಳಶಕ್ಕೆ ತುಂಬುವ ಮೂಲಕ ರಥಯಾತ್ರೆ ಆರಂಭಗೊಳ್ಳಲಿದೆ. ಧರ್ಮಸ್ಥಳ ಕ್ಷೇತ್ರ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡಿ, ಕಟೀಲು ಮೂಲಕ ಯಾತ್ರೆ ಸಾಗಿ ಬರಲಿದೆ. ಈ ದಾರಿಮೂಲಕ ಸಾಗುವ ವೇಳೆ ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿ ನೀರಿನ ಜೊತೆಗೆ ನಂದಿನಿ ನದಿಯ ನೀರನ್ನು ಕಳಶಕ್ಕೆ ತುಂಬಿಸಲಾಗುವುದು ಎಂದರು.

ರಥಯಾತ್ರೆ ಸಾಗುವ ದಾರಿಯುದ್ದಕ್ಕೂ ವಿವಿಧ ಧರ್ಮಗುರುಗಳು ಮೆರವಣಿಗೆಯನ್ನು ಸ್ವಾಗತಿಸಲಿದ್ದಾರೆ. “ನೇತ್ರಾವತಿ ನದಿ ತಿರುಗಿಸುವ ಯೋಜನೆಯನ್ನು ಕೈಬಿಡಲು ಜ 26ರ ಗಡು ನೀಡಲಾಗುವುದು. ನಂತರ ಇದನ್ನು ತಿರುಗಿಸುವವರ ಅಸ್ತಿತ್ವವನ್ನು ನಾವೇ ತಿರುಗಿಸುತ್ತೇವೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಯನ್ನು ವಿರೋಧಿಸಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೋರಾಟದಲ್ಲಿ ಕೈಜೋಡಿಸಲಿದ್ದಾರೆ. ರಥಯಾತ್ರೆಗೆ ಪೂಜಾರಿ ಅವರನ್ನು ಸಂಸದ ನಳಿನ್‍ಕುಮಾರ್ ಕಟೀಲು ಸ್ವಾಗತಿಸಲಿದ್ದಾರೆ ಎಂದರು.