ನೇತ್ರಾವತಿ ಉಳಿವಿಗೆ ಸಪ್ತ ಕ್ಷೇತ್ರ ರಥಯಾತ್ರೆ

ಸಿಟಿ ಬ್ಯೂರೋ ವರದಿ

ಮಂಗಳೂರು: ನೇತ್ರಾವತಿ ನದಿಯನ್ನು ಉಳಿಸಿಕೊಳ್ಳಲು ಎಲ್ಲಾ ಜನಸಮುದಾಯವನ್ನೊಳಗೊಂಡ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಗೆ ಜಿಲ್ಲೆ ಸಜ್ಜಾಗಿದ್ದು. ಈ ಕಾರ್ಯಕ್ಕೆ ಜಾತಿ, ಮತ, ಧರ್ಮ ಮತ್ತು ರಾಜಕೀಯ ಭೇದವಿಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಒಗ್ಗೂಡಬೇಕು ಎಂದು ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಯ ಕದ್ರಿ ಕಾರ್ಯಕ್ರಮದ ಸಂಚಾಲಕ ಡಿ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಈ ಬಗ್ಗೆ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, “ಯಾರೋ ಕೆಲವರ ದುರಾಸೆಗೆ ನೇತ್ರಾವತಿ ನದಿ ಕೈಬಿಟ್ಟು ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಇದರ ವಿರುದ್ಧ ಉಗ್ರವಾಗಿ ಪ್ರತಿಭಟಿಸುವ ಕಾಲ ಬಂದಿದ್ದು, ಮಂಗಳೂರಿನ ಜನ ನಮ್ಮ ನದಿಯನ್ನು ನಮ್ಮಲ್ಲಿಯೇ ಉಳಿಸಲು ಕಟಿಬದ್ಧರಾಗುವ ಸಂಕಲ್ಪ ಮಾಡಬೇಕಿದೆ. ಅದಕ್ಕಾಗಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ಡಿಸೆಂಬರ್ 10,11 ಮತ್ತು 12ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲಿದೆ” ಎಂದು ವೇದವ್ಯಾಸ್ ಕಾಮತ್ ವಿವರಿಸಿದ್ದಾರೆ.  ಡಿಸೆಂಬರ್ 11ರ ಆದಿತ್ಯವಾರ ಸಂಜೆ 6ಕ್ಕೆ ಮಂಗಳೂರಿನ ಕಣ್ಣೂರಿನಿಂದ ರಥಯಾತ್ರೆ ನಗರಪ್ರವೇಶ ಮಾಡಲಿದೆ. ಈ ಸಂದರ್ಭ ಕಣ್ಣೂರು ಮಸೀದಿಯ ಧರ್ಮಗುರುಗಳು, ಆಡಳಿತ ಮಂಡಳಿ ಮತ್ತು ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು, ಸಾರ್ವಜನಿಕರು ಮಸೀದಿಯ ಹೊರಗೆ ರಥಯಾತ್ರೆಗೆ ಭವ್ಯ ಸ್ವಾಗತ ನೀಡಲಿದ್ದಾರೆ. ಅಲ್ಲಿಂದ ಸಂಜೆ 6.45 ಕ್ಕೆ ರಥಯಾತ್ರೆ ಮಿಲಾಗ್ರಿಸ್ ಚರ್ಚ ಬಳಿ ಬರಲಿದೆ. ಇಲ್ಲಿ ಚರ್ಚಿನ ಧರ್ಮಗುರುಗಳು, ಆಡಳಿತ ಮಂಡಳಿಯ ಸದಸ್ಯರು, ಕ್ರೈಸ್ತ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ನಾಗರಿಕರು ರಥಯಾತ್ರೆಯನ್ನು ಎದುರುಗೊಂಡು ಸ್ವಾಗತಿಸಲಿದ್ದಾರೆ.

ಸಂಜೆ 7.30ಕ್ಕೆ ರಥಯಾತ್ರೆ ಕದ್ರಿ ದೇವಸ್ಥಾನದ ಮೈದಾನಕ್ಕೆ ಆಗಮಿಸಲಿದೆ. ಇಲ್ಲಿ ಕದ್ರಿ ದೇವಸ್ಥಾನದ ಅರ್ಚಕರು, ಮಂಗಳೂರಿನ ವಿವಿಧ ಜಾತಿ,ಸಮುದಾಯದ ಸಾವಿರಾರು ಸಮಾಜ ಬಾಂಧವರು ರಥಯಾತ್ರೆಯನ್ನು ಸ್ವಾಗತಿಸಲಿದ್ದು,8 ಗಂಟೆಗೆ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಕದ್ರಿಯಿಂದ ಮರುದಿನ ಬೆಳಿಗ್ಗೆ 8.30ಕ್ಕೆ ಸುರತ್ಕಲ್ ಕಡೆಗೆ ರಥಯಾತ್ರೆ ಸಾಗಲಿದೆ.