ಸಂತೆಕಟ್ಟೆಯ ವಾರದ ಸಂತೆಗೆ ರಸ್ತೆ ಬಳಕೆದಾರರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಗೋಪಾಲಪುರ ವಾರ್ಡಿನ ಕಲ್ಯಾಣಪುರ ವೀರಭದ್ರ ದೇವಸ್ಥಾನದ ಸಮೀಪದ ಸಂತೆಕಟ್ಟೆಯಲ್ಲಿ ನಡೆಯುವ ವಾರದ ಸಂತೆ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ಆಕ್ರೋಶಕ್ಕೆ ಗುರಿಯಾಗಿದೆ. ಪ್ರತಿ ಭಾನುವಾರ ನಡೆಯುವ ಈ ಸಂತೆಯಿಂದ ಜನಸಾಮಾನ್ಯರ ಓಡಾಟಕ್ಕೆ ಮಾತ್ರವಲ್ಲ ವಾಹನ ಸಂಚಾರಕ್ಕೂ ಅಡೆತಡೆಗಳುಂಟಾಗಿ ಪ್ರತಿ ಭಾನುವಾರ ಇಲ್ಲಿ ಟ್ರಾಫಿಕ್ ಸಮಸ್ಯೆಗಳು ಕಾಣಿಸಿಕೊಂಡು ದೊಡ್ಡ ಮಟ್ಟಿನ ಸಮಸ್ಯೆ ಎದುರಾಗಿದೆ.

ಎಪ್ರಿಲ್ ತಿಂಗಳಲ್ಲಿ ಉಡುಪಿ ನಗರಸಭೆ ಈ ಸಂತೆಯನ್ನು ಒಂದು ತಿಂಗಳೊಳಗೆ ವರ್ಗಾಯಿಸುವುದಾಗಿ ಮಾತು ಕೊಟ್ಟಿತ್ತು. ಆದರೆ ವಾರದ ಸಂತೆ ಮಾತ್ರ ಸಂತೆಕಟ್ಟೆ ಜಂಕ್ಷನಲ್ಲಿಯೇ ಇದುವರೆಗೆ ಮುಂದುವರಿದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರ ಬಳಕೆದಾರರಿಗೆ ಭಾರೀ ಅನಾನುಕೂಲತೆಗಳು ಎದುರಾಗಿವೆ.

ಪ್ರತಿ ಭಾನುವಾರ ನಡೆಯುವ ಈ ಸಂತೆ ಸರ್ವಿಸ್ ರಸ್ತೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುತ್ತದೆ. ಪರಿಣಾಮ ದ್ವಿಚಕ್ರ ಮತ್ತು ನಾಲ್ಕುಚಕ್ರದ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ವಾಹನ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ವಾರದ ಸಂತೆಯ ವರ್ಗಾವಣೆ ವ್ಯವಸ್ಥೆ ಮಾಡದೆ ನಗರಪಾಲಿಕೆ ಮತ್ತು ಜಿಲ್ಲಾಡಳಿತ ತೋರಿರುವ ನಿರ್ಲಕ್ಷ್ಯತೆ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಂತೆ ವರ್ಗಾವಣೆ ಬಗ್ಗೆ ಹಲವು ಬಾರಿ ಭರವಸೆ ಮಾತುಗಳನ್ನು ಕೇಳಿದ್ದೇನೆ ಆದರೆ ಇದುವರೆಗೆ ವರ್ಗಾವಣೆಯಾಗಿಲ್ಲ. ಸಂತೆಕಟ್ಟೆ ಮುಖ್ಯ ಜಂಕ್ಷನ್ ಆಗಿದ್ದು, ನಗರಪಾಲಿಕೆ ತಡಮಾಡದರೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನಗರಸಭೆ ಸದಸ್ಯ ಪ್ರತಿ ಸಲವೂ ಇದನ್ನು ನಗರಪಾಲಿಕೆ ಅಧ್ಯಕ್ಷರ ಗಮನಕ್ಕೆ ತರುತ್ತಿದ್ದಾರೆ. ಆದರೆ ಪರಿಹಾರಗಳು ಮಾತ್ರ ಹೊರಬರುತ್ತಿಲ್ಲ” ಎಂದು ನಿತ್ಯಾನಂದ ವಳಕಾಡು ಹೇಳಿದ್ದಾರೆ.

ಗೋಪಾಲಪುರ ವಾರ್ಡಿನ ಪುರಸಭೆ ಸದಸ್ಯ ಚಂದ್ರಕಾಂತ್ ಕೂಡ ಹಲವಾರು ಬಾರಿ ಈ ಬಗ್ಗೆ ಧ್ವನಿ ಎತ್ತಿರುವುದಾಗಿ ತಿಳಿಸಿದ್ದಾರೆ.

ನಗರಪಾಲಿಕೆ ಆಯುಕ್ತ ಡಿ ಮಂಜುನಾಥಯ್ಯರನ್ನು ಸಂಪರ್ಕಿಸಿದಾಗ, “ಜಿಲ್ಲಾಧಿಕಾರಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವೀರಭದ್ರ ದೇವಸ್ಥಾನದ ಪಕ್ಕದಲ್ಲಿರುವ ಜಾಗದಲ್ಲಿ ವಾರದ ಸಂತೆ ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಇದಕ್ಕೆ ಸಕಾರಾತ್ಮಕ ಫಲಿತಾಂಶ ದೊರೆಯುವ ನಿರೀಕ್ಷೆಯಲ್ಲಿ ನಾವಿದ್ದೇವೆ” ಎಂದು ಅವರು ತಿಳಿಸಿದ್ದಾರೆ.