ಪರ್ಕಳ ಶಾಲೆಯಲ್ಲಿ ಇಲೆಕ್ಟ್ರಾನಿಕ್ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಯಂತ್ರ ಅಳವಡಿಕೆ

ಕರಾವಳಿ ಅಲೆ  ವರದಿ

ಉಡುಪಿ : ಇಲ್ಲಿನ ಪರ್ಕಳ ಹೈಸ್ಕೂಲಿನಲ್ಲಿ ಎರಡು ತಿಂಗಳ ಹಿಂದೆ ಸುಮಾರು 25,000 ರೂ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಸ್ಯಾನಿಟರ್ ಪ್ಯಾಡ್ ವಿಲೇವಾರಿ ಯಂತ್ರ ಅಳವಡಿಸಲಾಗಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ಬಹಳಷ್ಟು ಸಹಾಯವಾಗಿದೆ. 7ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ಮಾಸಿಕ ಋತುವಿನ ಅವಧಿಯಲ್ಲಿ ಶಾಲೆಗೆ ರಜೆ ಹಾಕುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ವಿದ್ಯಾರ್ಥಿಗಳಿಗೆ ನಿರಾಳವಾದಂತಾಗಿದೆ.

ಪರ್ಕಳ ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ 115 ವಿದ್ಯಾರ್ಥಿಗಳಿದ್ದರೆ, ಇಂಗ್ಲಿಷ್ ಮಾಧ್ಯಮ ವಿಭಾಗದಲ್ಲಿ 500 ವಿದ್ಯಾರ್ಥಿಗಳಿದ್ದಾರೆ. ಈ ವ್ಯವಸ್ಥೆಯನ್ನು ದಾನಿಗಳ ಸಹಾಯದಿಂದ 25,000 ರೂ ವೆಚ್ಚದಲ್ಲಿ ಅಳವಡಿಸಲಾಗಿದೆ.

“ಇದೊಂದು ತುಂಬಾ ಪ್ರಯೋಜನಕಾರಿಯಾದ ಯೋಜನೆಯಾಗಿದ್ದು, ಎಲ್ಲಾ ಶಾಲೆಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಶಾಲೆಯನ್ನು ಸ್ವಚ್ಛವಾಗಿಡಬಹುದು ಮತ್ತು ನ್ಯಾಪ್ಕಿನ್ ವಿಲೇವಾರಿಗೆ ಮುಜುಗರಪಡುವುದು ತಪ್ಪುತ್ತದೆ” ಎಂದು 10 ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಯಂತ್ರವನ್ನು ಹೆಣ್ಮಕ್ಕಳ ಶೌಚಾಲಯದಲ್ಲಿ ಅಳವಡಿಸಲಾಗಿದೆ. ಹೆಣ್ಮಕ್ಕಳು ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು ಸ್ವಚ್ಛ ಭಾರತ ಸ್ವಚ್ಛ ವಿದ್ಯಾಲಯ ಕಾರ್ಯಕ್ರಮವನ್ನು 2014ರಲ್ಲಿ ಪ್ರಾರಂಭಿಸಿದೆ. ಇದೇ ವೇಳೆ ಶಾಲೆಗಳಲ್ಲಿ ನೈರ್ಮಲ್ಯತೆ ಮತ್ತು ಶಾಲಾ ಮಕ್ಕಳ ವರ್ತನೆ ಅಭಿವೃದ್ಧಿಗೆ ಸೂಕ್ತ ಕ್ರಮ ಆರಂಭಿಸುವಂತೆ ಸೂಚಿಸಿದೆ.

“ಈ ವರ್ಷ ಸ್ವಚ್ಛ ವಿದ್ಯಾಲಯ ಪ್ರಶಸ್ತಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೇವೆ. ಸ್ಯಾನಿಟರಿ ನ್ಯಾಪ್ಕಿನ್ ಡಿಸ್ಪೋಸಲ್ ಯಂತ್ರ ಅಳವಡಿಸಿರುವುದೇ ಇದಕ್ಕೆ ಮಾನದಂಡ. ಶಾಲೆಯಲ್ಲಿ ವಿದ್ಯಾರ್ಥಿಗಳು ನ್ಯಾಪ್ಕಿನ್ ವಿಲೇವಾರಿಗೆ ತೊಂದರೆ ಎದುರಿಸುತ್ತಿದ್ದುದನ್ನು ನಾವು ಗಮನಿಸಿದ್ದೆವು. ಇದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಈ ಯಂತ್ರವನ್ನು ಅಳವಡಿಸಲು ನಿರ್ಧರಿಸಿದ್ದೆವು” ಎಂದು ಪರ್ಕಳ ಶಾಲೆಯ ಮುಖ್ಯೋಪಾಧ್ಯಾಯ ಸೂರ್ಯಕುಮಾರ್ ತಿಳಿಸಿದ್ದಾರೆ.

LEAVE A REPLY