ಗಂಧದ ಮರ ಕಳವು

ನಮ್ಮ ಪ್ರತಿನಿಧಿ ವರದಿ

ಮುಂಡಗೋಡ : ಪಟ್ಟಣದ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಸಾಕಷ್ಟು ಭದ್ರತೆಯ ನಡುವೆಯೇ ಶ್ರೀಗಂಧದ ಮರವನ್ನು ಕಡಿದು ಸಾಗಿಸಿದ್ದು ರವಿವಾರ ಬೆಳಕಿಗೆ ಬಂದಿದೆ.

ಗಂಧದ ಗಿಡವನ್ನು ಯಂತ್ರದಿಂದ ಕತ್ತರಿಸಿ ಮಧ್ಯ ಭಾಗದ ತುಂಡು ಮಾತ್ರ ಸಾಗಿಸಲಾಗಿದ್ದು, ಟೊಂಗೆಗಳನ್ನು ಸ್ಥಳದಲ್ಲಿಯೇ ಬಿಸಾಡಲಾಗಿದೆ. ಎಪಿಎಂಸಿ ಆವರಣದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಶಿರಸಿಯ ತೋಟಗಾರ್ಸ್ ಸಂಸ್ಥೆ ಹಾಗೂ ವಿವಿಧ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ರಾತ್ರಿ ಕಾವಲು ಸಿಬ್ಬಂದಿ ಇದ್ದರೂ ಕೂಡ ಈ ಕೃತ್ಯ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಕೂಡ ಈ ಆವರಣದಲ್ಲಿದ್ದ ಸಾಗವಾನಿ ಮರವೊಂದನ್ನು ಕಡಿದು ಸಾಗಿಸಲಾಗಿತ್ತು. ಒಟ್ಟಾರೆ ಮೇಲಿಂದ ಮೇಲೆ ಇಲ್ಲಿ ಮರಕಳ್ಳರ ಕೈಚಳಕ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.