ಹೊರಜಿಲ್ಲೆಗೆ ಉಸುಕು ಸಾಗಾಟಕ್ಕೆ ವಿರೋಧ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ (ಉ ಕ) : ಜಿಲ್ಲೆಯ ಉಸುಕು ಹೊರಜಿಲ್ಲೆಗೆ ಸಾಗಾಟ ಮಾಡುವುದನ್ನು ವಿರೋಧಿಸಿ ತಾಲೂಕು ಲಾರಿ ಮಾಲಕರ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ಸಂಘ, ನಾಗರಿಕ ವೇದಿಕೆ, ಗುತ್ತಿಗೆದಾರರ ಸಂಘಗಳ ಸಹಯೋಗದೊಂದಿಗೆ ಮಂಗಳವಾರ ತಹಶೀಲ್ದಾರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಉಸುಕು ಸಾಗಾಟವನ್ನು ನಿಷೇಧಿಸಿ ಜಿಲ್ಲಾಡಳಿತ ಈಗಾಗಲೇ ಆದೇಶ ಮಾಡಿದೆ. ಆದರೂ ಸಹಿತ ಕೆಲವರು ಅಕ್ರಮವಾಗಿ ಜಿಲ್ಲೆಯ ಉಸುಕನ್ನು ಬೇರೆ ಜಿಲ್ಲೆಗೆ ಅವ್ಯಾಹತವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಅಕ್ರಮವಾಗಿ ಪ್ರತಿದಿವಸ 70-80 ಲಾರಿಗಳು ಜಿಲ್ಲೆಯ ಗಡಿ ಮುಖಾಂತರ ಬೇರೆ ಜಿಲ್ಲೆಗೆ ಉಸುಕು ಸಾಗಾಟ ನಡೆಸುತ್ತಿವೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಿರವತ್ತಿಯಲ್ಲಿ ಹಾಕಿದ ತನಿಖಾ ಠಾಣೆಯಲ್ಲಿ ಮರಳು ಉಸ್ತುವಾರಿ ಸಮಿತಿಗೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸದ್ರಿ ಠಾಣೆಯಲ್ಲಿ ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮರಾ ಸ್ಥಗಿತಗೊಳಿಸಲಾಗಿದೆ. ಇವುಗಳನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಕ್ರಮ ಆಗಬೇಕು. ಜಿಲ್ಲೆಯ ಹೊರಗೆ ಉಸುಕು ಸಾಗಾಟ ನಿಲ್ಲಬೇಕು. ಸ್ಥಳೀಯರಿಗೆ ಯೋಗ್ಯ ದರದಲ್ಲಿ ಉಸುಕು ಸಿಗುವಂತಾಗಬೇಕು” ಎಂದು ಆಗ್ರಹಿಸಿದರು.

ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, “ಜಿಲ್ಲಾಧಿಕಾರಿಗಳೇ ಜಾರಿಗೆ ತಂದ ಹೊರಜಿಲ್ಲೆಗೆ ಸಾಗಾಟ ಮಾಡುವುದನ್ನು ತಡೆಯುವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಇದಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ” ಎಂದರು.