`ಮರಳು ಸಾಗಾಟದ ಬೋಟು, ಟ್ರಕ್ಕುಗಳಿಗೆ ಜಿಪಿಎಸ್ ಅಳವಡಿಕೆ’

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ ಬೋಟು ಮತ್ತು ಟ್ರಕ್ಕುಗಳ ಚಲನೆಯನ್ನು ನಿರ್ಬಂಧಿಸಲು ಎಲ್ಲಾ ಮರಳು ಸಾಗಾಟ ಬೋಟುಗಳು ಮತ್ತು ಟ್ರಕ್ಕುಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ನ್ಯಾಯಮಂಡಳಿ ಮತ್ತು ಅರಣ್ಯ ಮತ್ತು ಪರಿಸರ ಸಚಿವಾಲಯ ಹೊರಡಿಸಿದ ನಿಯಮ ಮತ್ತು ನಿಯಂತ್ರಣಗಳನ್ನು ಅನುಸರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

“ಮರಳು ಗಣಿಗಾರಿಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ ಬೋಟು ಚಲನೆ ಸಾಧ್ಯವಿಲ್ಲದ ಪ್ರದೇಶಗಳಲ್ಲಿ ಮಾತ್ರ ಸಡಿಲಿಕೆ ನೀಡಲಾಗಿದ್ದು, ಮರಳು ಗಣಿಗಾರಿಕೆ ಮಾಡಲಾಗುತ್ತಿದೆ. ಹಾಗಾಗಿ ಎನ್ನೈಟಿಕೆಯ ತಜ್ಞರ ತಂಡಕ್ಕೆ ಮರಳು ಬ್ಲಾಕ್ ಪ್ರದೇಶಗಳನ್ನು ಗುರುತಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ತಜ್ಞರು ಕೆಲಸ ನಿರ್ವಹಿಸಿದ್ದು, ಮರಳು ದಿಣ್ಣೆಗಳನ್ನು ಗುರುತಿಸಿದ್ದಾರೆ” ಎಂದು ಅವರು ಹೇಳಿದರು.

ಎಲ್ಲಾ ಬೋಟುಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಈ ಮೂಲಕ ಬೋಟುಗಳ ಚಲನವಲನವನ್ನು ಪತ್ತೆಹಚ್ಚಬಹುದು. ಈ ಜಿಪಿಎಸ್ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಮರಳು ಸಾಗಿಸುವ ಲಾರಿ ಮತ್ತು ಟ್ರಕ್ಕುಗಳಿಗೂ ಜಿಪಿಎಸ್ ಅಳವಡಿಸಲಾಗುವುದು. ಬೋಟುಗಳಿಗೆ ಜಿಪಿಎಸ್ ಅಳವಡಿಕೆ ವೆಚ್ಚ ರೂ 19,000 ಮತ್ತು ಟ್ರಕ್ಕು ಅಥವಾ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ವೆಚ್ಚ ರೂ 70,000 ಎಂದು ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಟೆಂಡರು ಆಹ್ವಾನಿಸಿದ್ದು, ತಾಂತ್ರಿಕ ಸಾಮಥ್ರ್ಯ ಹೊಂದಿರುವ ಮತ್ತು ಇತರ ಜಿಲ್ಲೆಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳ ಕಂಪೆನಿ ಆಯ್ಕೆಯಾಗಲಿದೆ ಎಂದು ಮಧ್ವರಾಜ್ ಹೇಳಿದ್ದಾರೆ.