ಮರಳು ಕೊರತೆ ಸಮಸ್ಯೆ ಶೀಘ್ರದಲ್ಲೇ ಪರಿಹಾರ : ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಕರಾವಳಿ ನಿಯಂತ್ರಣವಿಲ್ಲದ ವಲಯಗಳಲ್ಲಿ ಮರಳು ಗಣಿಗಾರಿಕೆಗೆ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸು ತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತಲೆದೋರಿರುವ ಮರಳು ಕೊರತೆ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಕರಾವಳಿ ನಿಯಂತ್ರಿತ ವಲಯದಲ್ಲಿ ಮರಳು ಗಣಿಗಾರಿಕೆಗೆ ಪರವಾನಗಿಗಳು ಅಸ್ಥಿತ್ವದಲ್ಲಿದೆ. ಇದೀಗ ಸರ್ಕಾರ ಕರಾವಳಿ ನಿಯಂತ್ರಣವಿಲ್ಲದ ಪ್ರದೇಶಗಳಲ್ಲಿ ಪರವಾನಗಿ ಪ್ರಕಟಿಸಿದ್ದು, ಹಾಗಾಗಿ ಮರಳು ಪೂರೈಕೆ ಹೆಚ್ಚಾಗಲಿದೆ ಮತ್ತು ಮರಳು ಪೂರೈಕೆ ಕೊರತೆ ಪರಿಹಾರವಾಗಲಿದೆ” ಎಂದು ಸಚಿವರು ಹೇಳಿದ್ದಾರೆ.

“ರಾಜ್ಯ ಸರ್ಕಾರವು ಜಿಲ್ಲೆಯಲ್ಲಿ ಮರಳು ಮಾಫಿಯಾ ವಿರುದ್ಧ ಕಠಿಣ ನಿಲುವು ತೆಗೆದುಕೊಂಡಿದ್ದು, ಪರಿಣಾಮವಾಗಿ ಜಿಲ್ಲೆಯಲ್ಲಿ ಮರಳು ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ಸಾಕಾಗುವಷ್ಟು ಮರಳು ಶೇಖರಣೆ ಇದೆ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ, ಗುಣಮಟ್ಟದ ಮರಳಿನ ಕೊರತೆ ಕಂಡುಬಂದಿದೆ. ಇದೀಗ ಸಚಿವ ಸಂಪುಟವು ಕರಾವಳಿ ನಿಯಂತ್ರಿತ ವಲಯ ಮತ್ತು ನಿಯಂತ್ರಿತವಲ್ಲದ ವಲಯಗಳಲ್ಲಿ ಏಕರೂಪತೆ ತರಲು ನಿರ್ಧರಿಸಿದೆ. ಕೆಲವೇ ದಿನಗಳಲ್ಲಿ ಮರಳು ಕೊರತೆ ಸಮಸ್ಯೆ ಪರಿಹಾರವಾಗಲಿದೆ” ಎಂದು ಅವರು ಹೇಳಿದ್ದಾರೆ.