ಮರಳು ದಂಧೆಗೆ ಹೆದ್ದಾರಿ ನೇತ್ರಾವತಿ

ಬತ್ತಿದ ನದಿಯಲ್ಲಿ ಜೆಸಿಬಿ ಅಟ್ಟಹಾಸ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಇಂದಬೆಟ್ಟು ಮತ್ತು ಮಿತ್ತಬಾಗಿಲು ಗ್ರಾಮ ಪಂಚಾಯತ ವ್ಯಾಪ್ತಿಗೊಳಪಟ್ಟ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸವನ್ನು ಕೇಳುವವರೇ ಇಲ್ಲ, “ನಮ್ಮ ಗ್ರಾ ಪಂ ವ್ಯಾಪ್ತಿಗೊಳಪಡುವುದಿಲ್ಲ” ಎಂಬ ಅಪ್ಪಟ ಸುಳ್ಳು ಮಾಹಿತಿ ನೀಡುತ್ತಾ ಎರಡೂ ಗ್ರಾ ಪಂ ಆಡಳಿತಗಳೂ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇಂದಬೆಟ್ಟು ಗ್ರಾ ಪಂ ಸಮೀಪ ಮತ್ತು ಮಿತ್ತಬಾಗಿಲು ಗ್ರಾ ಪಂ ವ್ಯಾಪ್ತಿಗೊಳಪಟ್ಟ ಎರುಕಡಪು ಪ್ರದೇಶದಲ್ಲಿ ನೇತ್ರಾವತಿ ನದಿ ಪಾತ್ರವು ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಬಲಿಯಾಗುತ್ತಿದೆ. ದಿನನಿತ್ಯ ಜೆಸಿಬಿಯಲ್ಲಿ ಮರಳಿಗಾಗಿ ಅಲ್ಲಲ್ಲಿ ಆಳದ ಗುಂಡಿ ತೋಡಲಾಗಿದ್ದು ದಂಧೆಯ ತೀವ್ರತೆಗೆ ಸಾಕ್ಷಿಯಾಗಿ ಪರಿಣಮಿಸಿದೆ. ಮರಳು ತೆಗೆಯುವ ಪ್ರದೇಶ ಮಿತ್ತಬಾಗಿಲು ಗ್ರಾ ಪಂ ವ್ಯಾಪ್ತಿಗೊಳಪಟ್ಟಿದ್ದು, ಮರಳು ಸಾಗಾಟದ ರಸ್ತೆಯು ಇಂದಬೆಟ್ಟು ಗ್ರಾ ಪಂ ಆಡಳಿತ ವ್ಯಾಪ್ತಿಗೆ ಸೇರಿದ್ದರೂ ಎರಡೂ ಪಂಚಾಯತಿಗಳ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ಅವೈಜ್ಞಾನಿಕ ಮರಳು ದರೋಡೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಂಪೂರ್ಣ ಬೆಂಬಲಿಗರಂತೆ ವರ್ತಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬೇಸಿಗೆಯ ಪ್ರಾರಂಭದಲ್ಲಿ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಮಳೆಗಾಲದಲ್ಲಿ ಸಹಜವಾಗಿ ನದಿಯಲ್ಲಿ ಶೇಖರಣೆಯಾಗುವ ಸಾವಿರಾರು ಲೋಡ್ ಮರಳನ್ನು ಪ್ರಾರಂಭದಲೇ ವಾಹನಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡಿ ಮಾರುವ ಅಥವಾ ರಾಶಿ ಹಾಕುವ ದಂಧೆಕೋರರು ಮೇಲಿನ ಮರಳು ಮುಗಿದ ಮೇಲೆ ನದಿಗೆ ಲಂಗು ಲಗಾಮಿಲ್ಲದೆ ಜೆಸಿಬಿ ಇಳಿಸಿ ನದಿಯ ಎದೆಯನ್ನು ಬಗೆದು ಆಳದ ಗುಂಡಿ ಮಾಡಿ ಮರಳು ಸಂಗ್ರಹಿಸುತ್ತಾರೆ. ಜೆಸಿಬಿ ಮೂಲಕ ತಮ್ಮ ಸ್ವಾರ್ಥ ಲಾಭದ ದಂಧೆಗಾಗಿ ನದಿಯ ದಿಕ್ಕನ್ನೇ ಬದಲಿಸಿ ಪಾತ್ರವನ್ನು ಬೇಕಾದಂತೆ ತಿರುಗಿಸಿ ರಸ್ತೆ ನಿರ್ಮಿಸಿಕೊಂಡಿರುವುದು, ಕಾಟಿಂಗ್ ರಾಶಿ ಇಟ್ಟುಕೊಂಡಿರುವುದು ನದಿಯುದ್ದಕ್ಕೂ ಕಾಣುತ್ತಿದೆ.

ಇಡೀ ನದಿಯಲ್ಲಿ ಹೆದ್ದಾರಿ ಅಗಲದ ರಸ್ತೆ ಮಾಡಿಕೊಂಡಿದ್ದು ಕೇಳುವವರೇ ಇಲ್ಲವೆಂಬಂತಾಗಿದೆ. ಮಿತ್ತಬಾಗಿಲು ಮತ್ತು ಇಂದಬೆಟ್ಟು ಗ್ರಾ ಪಂ ಆಡಳಿತಗಳು ಯಾವುದೇ ಕ್ರಮ ಕೈಗೊಳ್ಳದೇ ದಂಧೆಕೋರರಿಗೆ ಅನುಕೂಲಕರವಾಗುವಂತೆ ನಿರ್ಲಕ್ಷ್ಯ ವಹಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮವಾಗಿದ್ದರೂ 1 ಪಿಕಪ್ ಲೋಡ್ ಮರಳು 6000 ರೂಪಾಯಿಗೂ ಅಧಿಕ ಬೆಲೆಯಲ್ಲಿ ಪೈಪೋಟಿಯಲ್ಲಿ ಸಾಗಾಟವಾಗುತ್ತದೆ. ಇಂದಬೆಟ್ಟು ಸನಿಹದ ನಿರ್ಭೀತ ಮರಳು ದಂಧೆಯ ಬಗ್ಗೆ ಬೆಳ್ತಂಗಡಿ ತಹಶೀಲ್ದಾರರಿಗೆ ಪದೇಪದೇ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ, ಪೊಲೀಸರಿಗೆ ಕರೆ ಮಾಡಿದರೆ ಸಮಯವಿಲ್ಲ ಎಂಬ ಉತ್ತರ ಬರುತ್ತದೆ ಎಂದು ಆರೋಪಿಸಿರುವ ನಾಗರಿಕರು, ಕಂದಾಯ ಇಲಾಖೆ ಮತ್ತು ಪೊಲೀಸರ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.