ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಪೆರ್ಲ, ಸಹಿತ ವಿವಿಧ ಕಡೆಗಳ ಹೊಳೆಗಳಿಂದ ವ್ಯಾಪಕವಾಗಿ ಮರಳು ಸಂಗ್ರಹಿಸಿ ನೆರೆಯ ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಸಹಿತ ವಿವಿಧ ಜಿಲ್ಲೆಗಳಿಗೆ ಸಾಗಿಸಿ ಹಣ ಸಂಪಾದಿಸುವ ತಂಡ ಪ್ರತಿ ದಿನ ಲಕ್ಷಾಂತರ ರೂ ಗಳಿಸುತ್ತಿದ್ದಾರೆ.
ಅಕ್ರಮವಾಗಿ ಕರ್ನಾಟಕದ ಗಡಿ ಪ್ರದೇಶಗಳ ಹೊಳೆಗಳಿಂದ ಸಂಗ್ರಹಿಸುವ ಮರಳುಗಳನ್ನು ತೂಮಿನಾಡು, ಕೆದಂಬಾಡಿ, ವರ್ಕಾಡಿ, ಗೋವಿಂದ ಪೈ ರಸ್ತೆ ಒಳದಾರಿಗಳ ಮೂಲಕ ಪೊಲೀಸರ ಬಲೆಗೆ ಸಿಲುಕದಂತೆ ಕೊಂಡೊಯ್ಯಲಾಗುತ್ತದೆ. ಪೊಲೀಸರ ಚಲನವಲನಗಳ ಮೇಲೆ ನಿಗಾ ಇರಿಸಿ ಮರಳು ಲಾರಿಗಳ ಸಂಚಾರಕ್ಕೆ ಮಾಹಿತಿ ನೀಡುವ ತಂಡಗಳೂ ಕಾರ್ಯಾಚರಿಸುತ್ತಿರಬೇಕೆಂದು ಸಂಶಯಿಸಲಾಗಿದೆ. ಕೆಲ ಪೊಲೀಸರು ಕೂಡಾ ಇವರ ಜತೆ ಕೈ ಜೋಡಿಸಿದ್ದಾರೆಂಬ ಮಾತೂ ಕೂಡಾ ಕೇಳಿ ಬರುತ್ತಿದೆ.
ಗಡಿ ಪ್ರದೇಶಗಳ ಮೂಲಕ ಸಾಗಿಸಲಾಗುವ ಮರಳು ಲಾರಿಗಳು ಪೊಲೀಸರಿಗೆ ಅರಿವಾಗದಿರುವಂತೆ ಮರಳುಗಳ ಲೋಡ್ ಮೇಲ್ಭಾಗಕ್ಕೆ ಎಂ ಸ್ಯಾಂಡುಗಳನ್ನು ಹರವಿ ವಂಚನೆ ನಡೆಸುತ್ತಿರುವುದೂ ಕಂಡುಬಂದಿದೆ.
ಅಕ್ರಮ ಮರಳು ಸಹಿತ ಗಡಿ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸರು ಇನ್ನಷ್ಟು ಕಠಿಣ ಕಾನೂನು ಅನುಸರಿಸುವ ಅಗತ್ಯವಿದೆ. ಈಗಿರುವ ಕಾನೂನಿನಂತೆ ದಂಡ ವಸೂಲಿ ಮಾತ್ರ ಮಾಡುತ್ತಿದ್ದು, ಈ ಕಾರಣ ನೀಡಿ ಗ್ರಾಹಕರಿಂದ ಅಧಿಕ ಮೊತ್ತವನ್ನೂ ಮರಳು ಮಾಫಿಯಾಗಳು ವಸೂಲು ಮಾಡುತ್ತಿರುವುದರಿಂದ ಇದರ ಬದಲಿಗೆ ಇನ್ನಷ್ಟು ಬಿಗುವಿನ ಕ್ರಮ ಅಗತ್ಯವಿದೆ ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ.