ರಸ್ತೆಯಂಚಲ್ಲೇ ಉಳಿಸಿಹೋದ ಮರಳು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಡಾಮರು ರಸ್ತೆಗೆ ಮರಳು ಹರಡಿ ಅವೈಜ್ಞಾನಿಕ ರೀತಿಯಲ್ಲಿ ಪಡುಬಿದ್ರಿ ಹೃದಯ ಭಾಗದ ಮುಖ್ಯ ಮಾರುಕಟ್ಟೆ ರಸ್ತೆಗೆ ಹಾಕಲಾದ ಇಂಟರಲಾಕ್ ಅಲ್ಲಲ್ಲಿ ಏರಿಳಿತವಾಗಿ, ಈ ರಸ್ತೆಗೆ ಹುಟ್ಟಿನಲ್ಲೇ ಸಾವು ಸಂಭವಿಸಿದೆಯೋ ಎಂಬಂತಾಗಿದೆ ಎಂಬುದಾಗಿ ಗ್ರಾಮಸ್ಥರು ಕಾಮಗಾರಿಯ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಹೆಜಮಾಡಿಯ ಶರೀಫ್ ಎಂಬವರು ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡು ಮತ್ಯಾರಿಗೋ ಈ ಇಂಟರಲಾಕ್ ಅಳವಡಿಸುವುದಕ್ಕೆ ಒಳಗುತ್ತಿಗೆ ನೀಡಿದ್ದರು. ಈ ಕಾಮಗಾರಿಯ ಬಗ್ಗೆ ಬಹಳಷ್ಟು ಮಂದಿ ಕಾಮಗಾರಿಯ ಆರಂಭದ ಸಮಯದಲ್ಲೇ ವಿರೋಧ ವ್ಯಕ್ತಪಡಿಸಿ ಈ ಭಾಗದ ಗ್ರಾ ಪಂ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಒಬ್ಬರಂತೆ ಮತ್ತೊಬ್ಬರು ಚೈನ್ ಸಿಸ್ಟಂನಂತೆ ಈ ಅವೈಜ್ಞಾನಿಕ ಕಾಮಗಾರಿಯನ್ನು ಬೆಂಬಲಿಸಿದ್ದು ವಿನಃ ಹತ್ತಿರ ಬಂದು ಈ ಕಾಮಗಾರಿಯ ವೀಕ್ಷಣೆ ಮಾಡುವ ಸೌಜನ್ಯವನ್ನು ತೋರಿಸಿಲ್ಲ. ಜನಪ್ರತಿನಿಧಿಗಳ ವರ್ತನೆಗೆ ಈ ಮಂದಿ ಗುತ್ತಿಗೆದಾರರಿಂದ ಪಡೆದ ಇನಾಮು ಏನು ಎಂಬುದು ನಿಗೂಢ ಎನ್ನುತ್ತಾರೆ ಆಕ್ರೋಶಿತ ಸಾರ್ವಜನಿಕರು.

ರಸ್ತೆಗೂ ಪಾದಚಾರಿ ದಾರಿಗೂ ಕೆಲವು ಕಡೆಗಳಲ್ಲಿ ಸುಮಾರು ಒಂದು ಅಡಿ ಅಂತರ ಎತ್ತರವಿದ್ದು ಒಂದು ಕಡೆ ವಯೋವೃದ್ಧರು ಸಮಸ್ಯೆ ಅನುಭವಿಸುತ್ತಿದ್ದರೆ, ಈ ಸಮಸ್ಯೆ ಮುಂದಿನ ಮಳೆಗಾಲದಲ್ಲಿ ಉಲ್ಭಣವಾಗುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಅಭಿಪ್ರಾಯ. ಅದಲ್ಲದೆ ಕಾಮಗಾರಿಗಾಗಿ ತಂದು ಉಳಿದ ಮರಳನ್ನು ರಸ್ತೆಯಂಚಿನಲ್ಲೇ ಗುತ್ತಿಗೆದಾರರು ಉಳಿಸಿ ಹೋಗಿದ್ದರಿಂದ ಬೈಕ್ ಸವಾರರು ಘನ ವಾಹನಗಳಿಗೆ ದಾರಿ ಬೀಡುವ ಸಂದರ್ಭ ಉರುಳಿ ಬೀಳುವ ಸಾಧ್ಯತೆ ಇದ್ದರೂ, ಈ ದಾರಿಯಾಗಿ ಸ್ಥಳೀಯ ಜನಪ್ರತಿನಿಧಿಗಳು ನಿತ್ಯ ಸಂಚಾರಿಗಳಾಗಿದ್ದರೂ ಈ ಬಗ್ಗೆ ಯಾವುದೇ ರೀತಿಯಲ್ಲಿ ಗಮನ ಹರಿಸುತ್ತಿಲ್ಲ.

ಜನರ ಬಹಳಷ್ಟು ಬೇಡಿಕೆಯ ಈ ರಸ್ತೆಗೆ ಡಾಮರೀಕರಣವೇ ಸೂಕ್ತ ಪರಿಹಾರ ಎಂಬುದಾಗಿದ್ದರೂ, ಯಾವ ಮಾನದಂಡದಲ್ಲೋ ಏನೋ ಅವೈಜ್ಞಾನಿಕವಾಗಿ ಇಂಟರಲಾಕ್ ಅಳವಡಿಸಲಾಗಿದೆ.