ಗೌರಿ ಹತ್ಯೆ ತನಿಖೆ ಸನಾತನ ಸಂಸ್ಥಾ ಸದಸ್ಯರ ವಿಚಾರಣೆ

15ಕ್ಕೂ ಹೆಚ್ಚು

ಮಂದಿಯ ತನಿಖೆ

 ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ,  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈಗಾಗಲೇ  ಸನಾತನ ಸಂಸ್ಥಾ ಸದಸ್ಯರೂ ಸೇರಿದಂತೆ ಸುಮಾರು 15 ಮಂದಿಯನ್ನು ವಿಚಾರಣೆಗೆ ಗುರಿ ಪಡಿಸಿದೆ. ತನಿಖಾ ತಂಡದ  ಅಧಿಕಾರಿಗಳು ಗೋವಾದಲ್ಲಿರುವ ಸನಾತನ ಸಂಸ್ಥಾ ಆಶ್ರಮಕ್ಕೆ ಭೇಟಿ ನೀಡಿದರೆ ಇನ್ನೊಂದು ತಂಡ ಮುಂಬೈಗೆ ಆಗಮಿಸಿ ಅಲ್ಲಿರುವ ಕೆಲ ಸನಾತನ ಸಂಸ್ಥಾ ಸದಸ್ಯರನ್ನು ಭೇಟಿಯಾಗಿ ಅವರನ್ನು ಪ್ರಶ್ನಿಸಿದೆ.

ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್ ಹಾಗೂ ವಿದ್ವಾಂಸ ಎಂ ಎಂ ಕಲಬುರ್ಗಿ ಪ್ರಕರಣಗಳಲ್ಲೂ ಸನಾತನ ಸಂಸ್ಥಾ ಪಾತ್ರದ ಬಗ್ಗೆ ಶಂಕೆಯಿರುವುದರಿಂದ ಹಾಗೂ ಈ ಹತ್ಯೆಗಳಿಗೂ ಗೌರಿ ಹತ್ಯೆಗೂ ಒಂದೇ ತೆರನಾದ ಆಯುಧ

ಉಪಯೋಗಿಸಲಾಗಿರುವುದರಿಂದ ಈ ಪ್ರಕರಣದಲ್ಲೂ ಸನಾತನ ಸಂಸ್ಥಾದ ಶಾಮೀಲಾತಿ ಬಗ್ಗೆ ಎದ್ದಿರುವ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ಸನಾತನ ಸಂಸ್ಥಾದ ಸದಸ್ಯರು ಈ ಹಿಂದೆ ಕೂಡ ಸ್ಫೋಟ ಪ್ರಕರಣಗಳಲ್ಲಿ ಬಂಧಿತರಾಗಿದ್ದು  ಸಂಸ್ಥೆಯ ರುದ್ರ ಪಾಟೀಲ್ ಸಹಿತ ಮೂರು ಮಂದಿ ಇತರ ಸದಸ್ಯರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು. ರುದ್ರ ಪಾಟೀಲ್ 2009ರ ಗೋವಾ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದಾನೆಂದು ಆರೋಪಿಸಲಾಗಿದ್ದು ಆತ  ಪನ್ಸಾರೆ ಪ್ರಕರಣದಲ್ಲಿಯೂ ಆರೋಪಿಯೆಂದು ಶಂಕಿಸಲಾಗಿದೆ.

ತರುವಾಯ ಸಿಟ್ ತಂಡ ನಗರದಲ್ಲಿರುವ ಕೆಲವೊಂದು ಹಿಂದೂ ಸಂಘಟನೆಗಳ ಕಚೇರಿಗೂ ಭೇಟಿ ನೀಡಿ ಸದಸ್ಯರನ್ನು ಪ್ರಶ್ನಿಸಿದೆ.