ಎರಡು ಚಿತ್ರಗಳಲ್ಲಿ ಕೃತಿ ಸನನ್

ಕೃತಿ ಸನನ್ ಈಗ ಬಾಲಿವುಡ್ಡಿನ ಎ ಗ್ರೇಡ್ ನಟಿಯಾಗಿ ನಿಧಾನಕ್ಕೆ ರೂಪುಗೊಳ್ಳುತ್ತಿದ್ದಾಳೆ. ಕೃತಿ ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸಿದ್ದ `ರಾಬಾ’ ಬಾಕ್ಸಾಫೀಸಿನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ ಆಕೆ ರಾಜಕುಮಾರ್ ರಾವ್ ಹಾಗೂ ಆಯುಷ್ಮಾನ್ ಖುರಾನಾ ಜೊತೆಗೆ ತೆರಹಂಚಿಕೊಂಡಿದ್ದ `ಬರೇಲಿ ಕಿ ಬರ್ಫಿ’ ಸಿನಿಮಾದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಕೃತಿ ಇನ್ನೆರಡು ಚಿತ್ರಗಳಲ್ಲಿ ನಟಿಸುವುದು ಫೈನಲೈಸ್ ಆಗಿದೆ.

ಕೃತಿ ಈಗ ಕಾಮಿಡಿ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾಳೆ. ಕೃತಿ ಈಗ `ಅರ್ಜುನ್ ಪಟಿಯಾಲಾ’ ಎನ್ನುವ ಚಿತ್ರದಲ್ಲಿ ನಟಿಸಲಿದ್ದು ಆಕೆ ಇದರಲ್ಲಿ ಮೊದಲ ಬಾರಿಗೆ ದಿಲ್ಜಿತ್ ದೊಸಾಂಜ್ ಜೊತೆ ಅಭಿನಯಿಸುತ್ತಿದ್ದಾಳೆ. ಈ ಸಿನಿಮಾದಲ್ಲಿ ಕೃತಿ ಜರ್ನಲಿಸ್ಟ್ ಪಾತ್ರವಹಿಸುತ್ತಿದ್ದಾಳೆ. ದಿನೇಶ್ ವಿಜಾನ್ ಈ ಚಿತ್ರ ನಿರ್ದೇಶಿಸುತ್ತಿದ್ದು ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಕೃತಿಯ `ಬರೇಲಿ ಕಿ ಬರ್ಫಿ’ಚಿತ್ರದಲ್ಲೂ ಕಾಮಿಡಿ ಎಲಿಮೆಂಟ್ ಸಾಕಷ್ಟಿದ್ದು ಆಕೆ ಆ ಚಿತ್ರದಲ್ಲಿ ಸಕತ್ ಮಿಂಚಿರುವುದರಿಂದ `ಅರ್ಜುನ್ ಪಟಿಯಾಲಾ’ ಚಿತ್ರವೂ ನಿರೀಕ್ಷೆ ಹುಟ್ಟಿಸಿದೆ.

ಕೃತಿ ಈ ಸಿನಿಮಾವಲ್ಲದೇ ವಿಶಾಲ್ ಭಾರಧ್ವಾಜ್ ಅವರ ಚಿತ್ರವೊಂದರಲ್ಲೂ ನಟಿಸುವುದು ಫೈನಲೈಸ್ ಆಗಿದೆ. ವಿಶಾಲ್ `ಚುರಿಯಾ’ ಎನ್ನುವ ಚಿತ್ರ ನಿರ್ದೇಶಿಸಲಿದ್ದು ಇದೊಂದು ಇಬ್ಬರು ಸಹೋದರಿಯರ ಕತೆಯಾಗಿದೆ. ಇದರಲ್ಲಿ ಸಹೋದರಿಯರ ನಡುವಿನ ಪ್ರತಿಸ್ಪರ್ಧೆಯೇ ಚಿತ್ರದ ಹೈಲೈಟ್ ಅಂತೆ. ಈ ಸಿನಿಮಾದಲ್ಲಿ ಸಹೋದರಿಯರಲ್ಲಿ ಒಬ್ಬಳ ಪಾತ್ರವನ್ನು ಕೃತಿ ವಹಿಸಲಿದ್ದು ಇನ್ನೊಂದು ಪಾತ್ರಕ್ಕಾಗಿ ಶೋಧ ನಡೆಯುತ್ತಿದೆ. ವಿಶಾಲ್ ಈ ಪಾತ್ರಕ್ಕಾಗಿ ಸೋನಾಕ್ಷಿಯನ್ನು ಸಂಪರ್ಕಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ.