`ಎಂಟಿವಿ ರೋಡೀಸ್’ ಶೋದಲ್ಲಿ `ಕಿರಿಕ್’ ಸಂಯುಕ್ತಾ

`ಕಿರಿಕ್ ಪಾರ್ಟಿ’ ಸಿನಿಮಾ ನೋಡಿದವರು ಈ ಬಬ್ಲಿ ಗರ್ಲನ್ನು ಬಹಳವಾಗಿ ಇಷ್ಟ ಪಟ್ಟೇ ಪಡುತ್ತಾರೆ. ತುಂಟನಗೆ ಬೀರುತ್ತಾ ನಾಯಕನನ್ನು ಗೋಳುಹೊಯ್ದುಕೊಳ್ಳುವ ತರ್ಲೆ ಹುಡುಗಿ ಪಾತ್ರದಲ್ಲಿ ನಟಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡ ಸಂಯುಕ್ತಾ ಹೆಗ್ಡೆ ಈಗ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ `ಎಂಟಿವಿ ರೋಡೀಸ್’ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾಳೆ. ಭಯಂಕರ ಕಷ್ಟಕರ ಟಾಸ್ಕ್‍ಗಳಿರುವ, ಟಾಸ್ಕ್ ಮಾಡದಿದ್ದರೆ ಸಕತ್ತಾಗಿ ಉಗಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಸೂಪರ್‍ಹಿಟ್ ಶೋ ಇದು. ಇದರಲ್ಲಿ ಭಾಗವಹಿಸಬೇಕು ಎಂದು ಸಂಯುಕ್ತಾ ತನ್ನ 8ನೇ ವರ್ಷದಿಂದಲೇ ಕನಸು ಕಾಣುತ್ತಿದ್ದು ಅದೀಗ ನನಸಾಗಿದೆ.

ಇನ್ನೂ 18ವರ್ಷ ಮಾತ್ರ ಪೂರೈಸಿರುವ ಸಂಯುಕ್ತಾ ಈಗ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮೊದಲನೇ ವರ್ಷ ಪದವಿಯಲ್ಲಿ ಓದುತ್ತಿದ್ದಾಳೆ. ಬ್ರಾಹ್ಮಣ ಹಾಗೂ ಕ್ರಿಶ್ಚಿಯನ್ ತಂದೆತಾಯಿಗೆ ಹುಟ್ಟಿದ ಸಂಯುಕ್ತಾಗೆ ಚಿಕ್ಕಂದಿನಿಂದಲೂ ಅಡ್ವೆಂಚರ್ ಅಂದ್ರೆ ಇಷ್ಟ. ಪ್ರವಾಸ ಅಂದ್ರೆ ಬಲು ಪ್ರೀತಿ. ರೋಡೀಸ್ ಆಡಿಷನ್ ಪಾಸಾಗೋದು ಅಂದರೆ ಸುಲಭದ ಮಾತಲ್ಲ. ಕಾರ್ಯಕ್ರಮದ ಜಡ್ಜ್‍ಗಳು ಕಷ್ಟಕರ ಟಾಸ್ಕ್‍ಗಳನ್ನು ಕೊಡುತ್ತಾರೆ.

ಈ ಬಗ್ಗೆ ಮಾತಾಡುತ್ತಾ ಸಂಯುಕ್ತಾ “ರಣ್ ವಿಜಯ್ ಸಿಂಗ್, ನೇಹಾ ದೂಫಿಯಾ, ಪ್ರಿನ್ಸ್ ನರುಲ, ಹರ್ಭಜನ್ ಸಿಂಗ್ ಮತ್ತು ಕರಣ್ ಕುಂದ್ರಾ ಆಡಿಷನ್ ಮಾಡುವುದಕ್ಕೆ ಕೂತಿದ್ದರು. ನನಗೆ ಡಾನ್ಸ್ ಮಾಡಿಸಿದರು. ಆಮೇಲೆ ಪುಶಪ್ ತೆಗೆಸಿದರು. ಮತ್ತೆ ಜಿರಲೆ ಹಿಡಿದುಕೊಳ್ಳಲು ಹೇಳಿದರು. ನಾನು ಅದಕ್ಕೆಲ್ಲಾ ಮೆಂಟಲೀ ಪ್ರಿಪೇರ್ ಆಗಿಯೇ ಹೋಗಿದ್ದು ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿ ಆ ಶೋಗೆ ಆಯ್ಕೆ ಆದೆ. ಗೆಲ್ಲುವ ಆಸೆ ಇದೆ.” ಎಂದು ಮಿನುಗು ಕಣ್ಣುಗಳಿಂದ ನುಡಿಯುತ್ತಾಳೆ ಈ ಪೋರಿ.