ಸ್ಯಾಮ್ಸನ್ ಶತಕದ ಗುಡುಗು ; ಜಹೀರ್, ಮಿಶ್ರಾ ಮಾರಕ ದಾಳಿಗೆ ಪುಣೆ ಪಲ್ಟಿ

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಪುಣೆ : ಕೇರಳದ ಯುವ ಆಟಗಾರ ಸಂಜು ಸ್ಯಾಮ್ಸಸ್ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ವಿಶ್ವದ ಘಟಾನುಘಾಟಿ ಆಟಗಾರರನ್ನು ಹೊಂದಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ವಿರುದ್ಧ 97 ರನ್ ಭರ್ಜರಿ ಜಯ ಗಿಟ್ಟಿಸಿದೆ.

ಮಂಳವಾರ ನಡೆದ ಈ ಪಂದ್ಯದಲ್ಲಿ  ಸಂಜು ಸ್ಯಾಮ್ಸನ್ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಪುಣೆ  ನಾಯಕ  ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ ಅಜಿಂಕ್ಯ ರಹಾನೆ ಟಾಸ್ ಗೆದ್ದು ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ನಡೆಸಲು ಆಹ್ವಾನವಿತ್ತರು.

ಇದರ ಸಂಪೂರ್ಣ ಪ್ರಯೋಜನವನ್ನು ಯುವ ದಾಂಡಿಗ ಸ್ಯಾಮ್ಸನ್ ಪಡೆದು ಕೊಂಡರು. ಪುಣೆ ತಂಡದ ಬೌಲರುಗಳೆಲ್ಲರನ್ನು ದಂಡಿಸಿ ಸಾಗಿದ ಇವರ ಬ್ಯಾಟಿಂಗ್ ವೈಭವ ನೆರೆದ ಕ್ರಿಕೆಟ್ ಅಭಿಮಾನಿಗಳನ್ನು ಪುಳಕಿತಗೊಳಿಸಿತು. ಸ್ಥಿರತೆಯ ಬ್ಯಾಟಿಂಗ್ ಮೂಲಕ ಎದುರಿಸಿದ್ದ 63 ಎಸೆತಗಳಲ್ಲಿ 102 ರನ್ ಬಾರಿಸಿದ ಇವರು, 8 ಬೌಂಡರಿ 5 ಸಿಕ್ಸರುಗಳ ಸ್ಫೋಟಕ ಶತಕ ದಾಖಲಿಸಿ ಕೊಂಡರು. ಕೊನೆಯಲ್ಲಿ ಆಲ್ರೌಂಡರ್ ಕ್ರಿಸ್ ಮೋರಿಸ್ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 9 ಎಸೆತಗಳಲ್ಲಿ 38 ರನ್ ಹೊಡೆದು ತಂಡದ ಸ್ಕೋರ್ 4 ವಿಕೆಟ್ ಗಳ ನಷ್ಟ ಕ್ಕೆ 205 ರನ್ ಸೇರಿಸಲು ನೆರವಾದರು.

ಜಹೀರ್, ಮಿಶ್ರಾ ಮಾರಕ ದಾಳಿ

ಡೆಲ್ಲಿ ತಂಡದ  ಬೃಹತ್ ಮೊತ್ತವನ್ನು ಬೆಂಬತ್ತುವ ನಿಟ್ಟಿನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ಬ್ಯಾಟ್ಸಮನ್ನರು ಸಂಪೂರ್ಣ ವೈಫಲ್ಯತೆ ಕಂಡರು. ಡೆಲ್ಲಿ ತಂಡದ  ಅನುಭವಿ ಬೌಲರುಗಳಾದ ಜಹೀರ್ ಖಾನ್, ಅಮಿತ್ ಮಿಶ್ರಾ ಪುಣೆ ತಂಡದ ಪ್ರಮುಖ ಬ್ಯಾಟ್ಸಮನ್ನರ ಪತನಕ್ಕೆ ಕಾರಣರಾದರು. ಜಹೀರ್ 20 ರನ್ನಿಗೆ 3 ವಿಕೆಟ್ ಪಡೆದರೆ, ಮಿಶ್ರಾ 11 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು.

ಪುಣೆ ಪರ ಕನ್ನಡಿಗ ಮಾಯಾಂಕ್ ಅಗರ್ವಾಲ್ 20 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ದಾಂಡಿಗರೂ 20ರ ಗಡಿ ದಾಟಲಿಲ್ಲ. ಅಂತಿಮವಾಗಿ ಪುಣೆ ತಂಡ 108 ರನ್ನುಗಳಿಗೆ ಸರ್ವಪತನ ಕಂಡು 97 ರನ್ನುಗಳ ಸೋಲನ್ನು ಕಂಡಿತು.

ಐಪಿಎಲ್ -10ನೇ ಆವೃತ್ತಿಯಲ್ಲಿ ಮೊದಲ ಶತಕ ದಾಖಲಿಸಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಭರ್ಜರಿ ಗೆಲುವಿಗೆ ಕಾರಣರಾದ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


ಇಂದಿನ ಮುಖಾಮುಖಿ

ಮುಂಬೈ ಇಂಡಿಯನ್ಸ್ 

ವರ್ಸಸ್

ಸನ್ ರೈಸರ್ಸ್ ಹೈದರಾಬಾದ್

ಸಮಯ : ರಾತ್ರಿ 8