ಚಿತ್ರಾಪು ಗದ್ದೆಗೆ ಉಪ್ಪು ನೀರು ನುಗ್ಗಿ ಲಕ್ಷಾಂತರ ರೂ ಹಾನಿ, ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ದಿನಗಳ ಹಿಂದೆ ಮುಲ್ಕಿ ನಗರ ಪಂಚಾಯತಿ ವ್ಯಾಪ್ತಿಯ ಚಿತ್ರಾಪು ಘಜನಿ ಮತ್ತು ಸಾಗು ಎಂಬಲ್ಲಿ ಸಮುದ್ರದ ಏರಿಳಿತದಿಂದ ವ್ಯಾಪಕ ಉಪ್ಪು ನೀರಿ ಗದ್ದೆಗೆ ನುಗ್ಗಿ ಕೃಷಿ ಹಾನಿಯಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಸ್ಥಳೀಯರಾದ ವಿಠಲ ಕೋಟ್ಯಾನ್ ದೂರಿನ ಬಗ್ಗೆ ಮುಲ್ಕಿ ನ ಪಂ ಮುಖ್ಯಾಧಿಕಾರಿ ಇಂದು ಎಂ, ಇಂಜಿನಿಯರ್ ಅಶ್ವಿನಿ ಹಾಗೂ ಸ್ಥಳೀಯ ಪಂಚಾಯತಿ ಸದಸ್ಯರಾದ ಸಂದೀಪ್, ಯೋಗೀಶ್ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಚಿತ್ರಾಪು ಬಳಿಯ ಸಾಗು ಎಂಬಲ್ಲಿ ಸುಮಾರು 8 ಎಕರೆ ಕೃಷಿ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದೆ. ಈ ಪ್ರದೇಶದಲ್ಲಿ ಕಿಂಡಿ ಆಣೆಕಟ್ಟು ಇಲ್ಲದ ಕಾರಣ ಉಪ್ಪು ನೀರು ನೇರವಾಗಿ ಕೃಷಿ ಪ್ರದೇಶಕ್ಕೆ ನುಗ್ಗಿ ಲಕ್ಷಾಂತರ ರೂ ಹಾನಿ ಸಂಭವಿಸಿದೆ ಎಂದು ಸ್ಥಳೀಯ ಕೃಷಿಕರಾದ ಸದಾನಂದ ಸನಿಲ್, ವಿಠಲ ಕೋಟ್ಯಾನ್ ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗೆ ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಕಿಂಡಿ ಆಣೆಕಟ್ಟು ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.