ಆರೋಪಿಗಳ ಜಾಮೀನು ರದ್ದು ಮಾಡಿದ ಸುಪ್ರೀಂ

ಕೊಲೆಯಾದ ನಾಸಿರ್

ಸಜಿಪ ನಾಸಿರ್ ಕೊಲೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಸಜಿಪ ನಾಸಿರ್ ಕೊಲೆ ಹಾಗೂ ಮುಸ್ತಫಾ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟಿನಿಂದ ಜಾಮೀನು ರದ್ದುಗೊಂಡಿದ್ದ ಮೂವರು ಆರೋಪಿಗಳು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

2015ರ ಆಗಸ್ಟ್ 7ರಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ಸಜಿಪಮೂಡ ಗ್ರಾಮದ ಆಲಾಡಿ ನಿವಾಸಿಗಳಾದ ನಾಸಿರ್ (30) ಹಾಗೂ ಮುಹಮ್ಮದ್ ಮುಸ್ತಫಾ (35) ಎಂಬವರು ರಿಕ್ಷಾದಲ್ಲಿ ಮೆಲ್ಕಾರಿನಿಂದ ಮನೆ ಕಡೆ ತೆರಳುತ್ತಿದ್ದ ವೇಳೆ ಆರೋಪಿಗಳಾದ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಸಾಲೆತ್ತೂರು ನಿವಾಸಿ ವಿಠಲ ಅಡ್ಯಂತಾಯ ಎಂಬವರ ಪುತ್ರ ವಿಜಿತ್ ಕುಮಾರ್ (22), ಮಂಗಳೂರು ತಾಲೂಕಿನ ವಾಮಂಜೂರು ಸಮೀಪದ ತಿರುವೈಲು ದ್ವಾರ ಬಳಿ ನಿವಾಸಿ ಸದಾನಂದ ಪೂಜಾರಿ ಎಂಬವರ ಪುತ್ರ ಅನೀಶ್ ಯಾನೆ ಧನು (23) ಹಾಗೂ ಮಂಗಳೂರು-ಬಡಗೋಳಿಪಾಡಿ ವಳಂಮಟ್ಟಿ ಮನೆ ನಿವಾಸಿ ಶೇಖರ ಪೂಜಾರಿ ಎಂಬವರ ಪುತ್ರ ಕಿರಣ್ ಪೂಜಾರಿ (24) ಎಂಬವರು ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಸಮೀಪದ ಕಂದೂರು ತಿರುವು ಬಳಿ ಎರಡು ಬೈಕುಗಳಲ್ಲಿ ಬಂದು ರಿಕ್ಷಾ ನಿಲ್ಲಿಸಿ ಪಣೋಲಿಬೈಲು ಹೋಗುವ ದಾರಿ ಕೇಳುವ ನೆಪದಲ್ಲಿ ತಲವಾರು ದಾಳಿ ನಡೆಸಿದ್ದರು. ಆರೋಪಿಗಳ ತಲವಾರು ಏಟಿಗೆ ಗಂಭೀರ ಗಾಯಗೊಂಡ ನಾಸಿರ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರೆ, ರಿಕ್ಷಾ ಚಾಲಕ ಮುಸ್ತಫಾ ಗಂಭೀರ ಗಾಯಗೊಂಡು ಬಳಿಕ ಚೇತರಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಮುಖ ಆರೋಪಿ ತಾಲೂಕಿನ ಮಂಚಿ ನಿವಾಸಿ ಅಭಿಜಿತ್ ಎಂಬಾತನ ತಲೆ ಮರೆಸಿಕೊಂಡಿದ್ದು, ಇನ್ನೂ ಬಂಧನವಾಗಿಲ್ಲ.

ಬಂಧಿತ ಮೂವರು ಕೊಲೆ ಆರೋಪಿಗಳಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿಂಗಳೊಳಗೆ ಜಾಮೀನು ಮಂಜೂರು ಮಾಡಿತ್ತು. ಈ ಬಗ್ಗೆ ಮುಸ್ತಫಾ ಅವರು ರಾಜ್ಯ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕೋರಿಕೊಂಡಿದ್ದರು. ವಾದ-ಪ್ರತಿವಾದ ಹಾಗೂ ಬಂಟ್ವಾಳ ಪೊಲೀಸರ ಹೇಳಿಕೆ ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಆರೋಪಿಗಳಿಗೆ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಗೊಳಿಸಿ ಆದೇಶ ನೀಡಿತ್ತು.

ಹೈಕೋರ್ಟ್ ಆದೇಶವನ್ನು ರದ್ದು ಪಡಿಸುವಂತೆ ಸುಪ್ರೀಂ ಕೋರ್ಟಿನಲ್ಲಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದ್ದು, ರಾಜ್ಯ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ. ಜಾಮೀನು ರದ್ದುಗೊಂಡಿರುವ ಮೂವರು ಆರೋಪಿಗಳ ಬಂಧನಕ್ಕಾಗಿ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.