ಕಾಸರಗೋಡಲ್ಲಿ ಕನ್ನಡ ಪಾರಮ್ಯಕ್ಕೆ ಕೇರಳ ಸರಕಾರಕ್ಕೆ ಸಾಹಿತ್ಯ ಸಮ್ಮೇಳನ ಒತ್ತಾಯ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಪೈವಳಿಕೆ ಸಮೀಪದ ಗಡಿ ಗ್ರಾಮ ಬವಾಯಾರುಪದವು ಶ್ರೀಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಎರಡು ದಿನ ನಡೆದ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಮಾಪ್ತಿಗೊಂಡಿತು. ಸಮ್ಮೇಲನದಲ್ಲಿ ಹಲವಾರು ಮಂದಿ ಪಾಲ್ಗೊಂಡರು.
ಈ ಸಂದರ್ಭ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
1. ಕಾಸರಗೋಡು ಜಿಲ್ಲೆ ಪ್ರಾದೇಶಿಕವಾಗಿ ವಿವಿಧ ಭಾಷಾ ವೈವಿಧ್ಯತೆಗಳ ಪ್ರದೇಶವಾಗಿರುವುದರಿಂದ ಇಲ್ಲಿನ ಕನ್ನಡ ಭಾಷೆಗೆ ಮಾನ್ಯತೆ ನೀಡಿ ಕನ್ನಡಿಗರ ಸಂವಿಧಾನಬದ್ದ ಹಕ್ಕನ್ನು ರಾಜ್ಯ ಸರಕಾರ ಒದಗಿಸಬೇಕು. ಗಡಿನಾಡು ಕಾಸರಗೋಡಿನ ಕನ್ನಡಿಗರ ಕಲೆ,ಸಂಸ್ಕತಿ ಹಬ್ಬ ಹರಿದಿನಗಳನ್ನು ಆಚರಿಸಲು ಅವಕಾಶ ನೀಡಲು ಜಿಲ್ಲಾಧಿಕಾರಿಗಳಿಗೆ ಕೇರಳ ರಾಜ್ಯ ಸರಕಾರ ಸೂಕ್ತ ನಿರ್ದೇಶನ ನೀಡಬೇಕು.
2. ಸರಕಾರವು ಮಲೆಯಾಳ ಭಾಷಾ ಮಸೂದೆ 2015ರಲ್ಲಿ ಉಲ್ಲೇಖಿಸಿರುವ ಕಡ್ಡಾಯ ಮಲೆಯಾಳ ಕಲಿಕೆ ಎಂಬ ಆದೇಶ ಜಾರಿ ಸಂಬಂಧ ಗಡಿನಾಡು ಕಾಸರಗೋಡು ಜಿಲ್ಲೆಗೆ ವಿನಾಯತಿ ನೀಡಬೇಕು. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲಿ ಮಲೆಯಾಳಕ್ಕೆ ಸಮಾನಾಂತರವಾಗಿ ಆಡಳಿತ,ಶೈಕ್ಷಣಿಕ ಭಾಷೆಯಾಗಿ ಬಳಸಲು ಅವಕಾಶ ಕೊಡಬೇಕು.
3. ಕಾಸರಗೋಡು ಕನ್ನಡಿಗರ ಹಿತರಕ್ಷಣೆ ಹಕ್ಕುಗಳಿಗೆ ಜಿಲ್ಲಾಧಿಕಾರಿ ಹಾಗೂ ಇತರ ಉನ್ನತ ಅಧಿಕಾರಿಗಳಿಗೆ ಆದೇಶ ನೀಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು, ರಾಜ್ಯ ಪುನರ್ ವಿಂಗಡಣೆಯ ಪರಿಶೀಲನೆಯಲ್ಲಿ ಮಹಾಜನ ವರದಿ ನೀಡಿರುವ ಆದೇಶವನ್ನು ಜಾರಿಗೊಳಿಸಿ ಕಾಸರಗೋಡನ್ನು ಕರ್ನಾಟಕದ ಭಾಗವಾಗಿಸಲು ಕೇರಳ ಸರಕಾರ ಕ್ರಮ ಕೈಗೊಳ್ಳಬೇಕು.
ಹಿರಿಯ ಕನ್ನಡ ಹೋರಾಟಗಾರರ ಸಹಿತ ಹಲವಾರು ಸಹಸ್ರಾರು ಮಂದಿ ಕನ್ನಡಿಗರು ಪಾಲ್ಗೊಂಡರು.