ಇಬ್ಬರು ಪಿಎಫ್ಐ ಕಾರ್ಯಕರ್ತರ ಬಂಧನ

ಕಾಟಿಪಳ್ಳದ ಸಫ್ವಾನ್ ಹತ್ಯೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹಾಡಹಗಲೇ ಕಾಟಿಪಳ್ಳ ನಿವಾಸಿ ಸಫ್ವಾನ್(24)ನನ್ನು ಕಿಡ್ನಾಪ್ ಮಾಡಿ ಕೊಲೆಗೈದು ಆಗುಂಬೆ ಘಾಟಿಯಲ್ಲಿ ಕಳೇಬರವನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಪಿಎಫ್‍ಐ ಕಾರ್ಯಕರ್ತ ಆರೋಪಿಗಳನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚೊಕ್ಕಬೆಟ್ಟು ನಿವಾಸಿಗಳಾದ ದಾವುದ್ ನೌಶಾದ್ (35) ಮತ್ತು ಮನ್ಸೂರ್ (34) ಬಂಧಿತರು. ಕಾಟಿಪಳ್ಳ ಎರಡನೇ ಬ್ಲಾಕ್ ನಿವಾಸಿ ಸಫ್ವಾನ್(22)ನನ್ನು ಅಕ್ಟೋಬರ್ 5ರಂದು ಈತನ ಮನೆಗೆ ನುಗ್ಗಿದ ಐವರ ತಂಡ ಕಿಡ್ನಾಪ್ ಮಾಡಿತ್ತು. ಇದೀಗ ಇಬ್ಬರ ಬಂಧನದ ಮೂಲಕ ಒಟ್ಟು ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಂತಾಗಿದೆ. ಬಂಧಿತ ಇಬ್ಬರು ಆರೋಪಿಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಮೂಡುಬಿದಿರೆ ಪೂಪಾಡಿ ಕಲ್ಲು ನಿವಾಸಿ ಮಹಮ್ಮದ್ ಫೈಝಲ್ ಇಬ್ರಾಹಿಂ ಶೇಖ್ ಯಾನೆ ಟೊಪ್ಪಿ ಫೈಝಲ್ ಯಾನೆ ಬಾಂಬೆ ಫೈಝಲ್(36), ಕೃಷ್ಣಾಪುರ ಪಮ್ಮೀಸ್ ಕಂಪೌಂಡ್ ನಿವಾಸಿ ಸಾಹಿಲ್ ಇಸ್ಮಾಯಿಲ್(22) ಎಂಬವರನ್ನು ಮುಂಬೈಯಲ್ಲಿ ಹಾಗೂ ಆರೋಪಿಗಳಿಗೆ ಸಹಕಾರ ನೀಡಿದ್ದ ಖಾದರ್ ಸಫಾ ಎಂಬಾತನನ್ನು ಬೆಂಗಳೂರಿನಲ್ಲಿ ಈಗಾಗಲೇ ಬಂಧಿಸಲಾಗಿತ್ತು. ದಾವೂದ್ ಮತ್ತು ಮನ್ಸೂರ್ ಆರೋಪಿಗಳಿಗೆ ವಾಹನವನ್ನು ಒದಗಿಸಿಕೊಟ್ಟಿದ್ದರು ಎಂದು ಸುರತ್ಕಲ್ ಠಾಣಾಧಿಕಾರಿ ಚೆಲುವರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಸಫ್ವಾನ್ ಹುಸೇನ್ ಎಂಬಾತನನ್ನು ಇನ್ನಷ್ಟೇ ಬಂಧಿಸಬೇಕಾಗಿದೆ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 26 ಕ್ರಿಮಿನಲ್ ಪ್ರಕರಣಗಳಿವೆ. ದೇರಳಕಟ್ಟೆಯಲ್ಲಿ ಇಬ್ಬರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೂ ದಾಖಲಾಗಿದೆ. ಈತ ಟಾರ್ಗೆಟ್ ಗುಂಪಿನ ಸದಸ್ಯನೂ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.