ಮಂದಿರ ಮರೆತ ಮೋದಿ ವಿರುದ್ಧ ಸಾಧುಗಳು ಗರಂ

ನವದೆಹಲಿ : ಅಸೆಂಬ್ಲಿ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಯೇ ಬಿಜೆಪಿ ಮುಖ್ಯ ನಿಲುವಾಗಿದೆ ಎಂದು ಪ್ರಧಾನಿ ಮೋದಿ ಒಂದಕ್ಕಿಂತ ಹೆಚ್ಚು ಬಾರಿ ಹೇಳಿದ್ದಾರೆ.
ಪ್ರಧಾನಿಯ ಈ ನಿಲುವಿಂದ ಬಿಜೆಪಿ ಪರವಾಗಿರುವ ಸಂತರು ತೀವ್ರ ಅಸಮಾಧಾನಗೊಂಡಿದ್ದು, ಉತ್ತರ ಪ್ರದೇಶದಲ್ಲಿ ಕೇಸರಿ ಪಕ್ಷಕ್ಕೆ ತಮ್ಮ ಬೆಂಬಲ ಸಿಗಬೇಕಿದ್ದರೆ, ಚುನಾವಣಾ ಪ್ರಣಾಳಿಕೆಯಲ್ಲಿ ಅಯೋಧ್ಯೆ ವಿಷಯ ಸೇರಿಸಬೇಕೆಂದಿದ್ದಾರೆ.
“ಮೋದಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಅಯೋಧ್ಯೆ ರಾಮ ಮಂದಿರದ ವಿಷಯದಲ್ಲಿ ಏನೂ ಆಸಕ್ತಿ ತೋರಿಸಿಲ್ಲ. ಮುಂದಿನ ಚುನಾವಣೆಯಲ್ಲೂ ಈ ವಿಷಯ ಪ್ರಸ್ತಾವಿಸದಿದ್ದರೆ ಕಷ್ಟವಾಗಲಿದೆ” ಎಂದು ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದರು.
“ಮೋದಿ ಅಧಿಕಾರಕ್ಕೆ ಬಂದ ಬಳಿಕ ನಾವೆಲ್ಲ ಮಂದಿರ ನಿರ್ಮಾಣದ ಭರವಸೆಯಲ್ಲಿದ್ದೆವು. ಮೋದಿ ಅಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣದ ಭರವಸೆ ನೀಡಬೇಕು. ಹೀಗಿದ್ದರೆ ಮಾತ್ರ ನಾವು (ಸಾಧು ಸಂತರು) ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಹಿಂದೂ ಮತ ಚಲಾಯಿಸಲು ಕೆಲಸ ಮಾಡಲು ಸುಲಭವಾಗುತ್ತದೆ. ಒಂದೊಮ್ಮೆ ನಾವು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರೆ, ಖಂಡಿತವಾಗಿಯೂ ಗೆಲುವಾಗಲಿದೆ” ಎಂದು ದಾಸ್ ವಿವರಿಸಿದರು. ಬಿಜೆಪಿ ಮಂದಿರ ವಿಷಯವನ್ನು ವರ್ಷಗಳಿಂದ ದುರ್ಬಲಗೊಳಿಸಿದ್ದರೂ, ಚುನಾ ವಣೆ ವೇಳೆ ಮಾತ್ರ ಅದು ಪ್ರಸ್ತಾವಿಸಲ್ಪಡುತ್ತಿದೆ.